ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ ಕೈಬಿಟ್ಟಿದೆ. ಹೀಗಾಗಿ ಹಟ್ಟಿ ಚಿನ್ನದ ಗಣಿ ಸಹಕಾರ ಸಂಘದ 37 ಜನ ಕಾರ್ಮಿಕರಿಗೆ 22 ತಿಂಗಳಿನಿಂದ ಕೆಲಸವೂ ಇಲ್ಲ ಸಂಬಳವೂ ಇಲ್ಲ. 750 ದಿನಗಳಿಂದ ಶಾಂತಿಯುತ ಹೋರಾಟ ನಡೆಸಿದರೂ ಕಾರ್ಮಿಕರ ಸಮಸ್ಯೆಗೆ ಗಣಿ ಆಡಳಿತ ಮಂಡಳಿ ಸ್ಪಂದನೆ ನೀಡಿಲ್ಲ. ಹೀಗಾಗಿ ಕಾರ್ಮಿಕರು ಗಣಿಯ ಪ್ರಧಾನ ವ್ಯವಸ್ಥಾಪಕರ ಮೂಲಕ ಉದ್ಯೋಗ ಕೊಡಿ ಇಲ್ಲವೇ 37 ಜನ ಕಾರ್ಮಿಕರ ಕುಟುಂಬಳಿಗೆ ದಯಾಮರಣಕ್ಕೆ ಅವಕಾಶ ಕೊಡಿ ಅಂತ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ಫೆಬ್ರವರಿ 14 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಹೋರಾಟದಲ್ಲಿ ಯಾರಿಗೆ ಏನೇ ಆದ್ರೂ ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿಯೇ ಕಾರಣ ಅಂತ ಕಾರ್ಮಿಕರು ಎಚ್ಚರಿಸಿದ್ದಾರೆ.
ಈಗಾಗಲೇ ಸಹಕಾರ ಸಂಘವನ್ನ ಸಮಾಪನಗೊಳಿಸಿ ಕಂಪೆನಿಯೇ ಸ್ಟೋರ್ ಪ್ರಾರಂಭಿಸಿದೆ. ಆದ್ರೆ ಕೆಲಸಗಾರರನ್ನ ಕಂಪೆನಿಯಲ್ಲಿ ಸೇರಿಸಿಕೊಳ್ಳದೇ ಸಂಬಳವನ್ನೂ ನೀಡದೆ ವೇತನ ಒಡಂಬಡಿಕೆಯ ನಿಯಮವನ್ನ ಉಲ್ಲಂಘನೆ ಮಾಡಿದೆ. ಕಾರ್ಮಿಕ ನೀತಿಯನ್ನ ಬದಿಗೊತ್ತಿ ತೆಗೆದುಕೊಂಡಿರುವ ನಿರ್ಧಾರದಿಂದ 37 ಜನ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿವೆ ಎಂದು ದಿ ಕೋ-ಆಪರೇಟಿವ್ ಸ್ಟೋರ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಇಮಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.