ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಅಧಿದೇವತೆ ಹಾಸನಾಂಬೆ (Hasanambe Temple) ಜಾತ್ರಾ ಮಹೋತ್ಸವಕ್ಕೆ ಇನ್ನೊಂದು ದಿನ ಬಾಕಿಯಿದ್ದು, ನಾಳೆ (ನ.3) ತೆರೆ ಬೀಳಲಿದೆ. ಇಂದು (ನ.2) ಸಾರ್ವಜನಿಕ ದರ್ಶನ ಅಂತ್ಯವಾಗಲಿದೆ.
ಕಳೆದ ಹತ್ತು ದಿನಗಳ ಕಾಲ ನಡೆದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ (Jatra Mahostava) ಯಶಸ್ಸು ಕಂಡಿದ್ದು, ಹಲವು ಇಲಾಖೆಗಳು ಶ್ರಮಿಸಿವೆ. ಅ.24ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಸುಮಾರು 11 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಹದಿಮೂರು ದಿನಗಳ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಪೊಲೀಸ್, ಕಂದಾಯ ಇಲಾಖೆ (Revenue Department) ಸೇರಿದಂತೆ ಹಲವು ಇಲಾಖೆಗಳು ಶ್ರಮಿಸಿವೆ. ಪ್ರಮುಖವಾಗಿ ಪೌರ ಕಾರ್ಮಿಕರು, ಸ್ಕೌಟ್ಸ್ ಅಂಡ್ ಗೈಡ್ಸ್ (Scouts And Guides) ವಿದ್ಯಾರ್ಥಿಗಳು ಹಗಲಿರುಳು ಎನ್ನದೇ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ರಾಜ್ಯ ಹವಾಮಾನ ವರದಿ- 02-11-2024
ಇಡೀ ದೇವಾಲಯದ ಸುತ್ತಮುತ್ತ ಹಾಗೂ ಇಡೀ ನಗರ ಸ್ವಚ್ಛವಾಗಿ ಕಾಣಲು ಪ್ರಮುಖ ಕಾರಣ ಪೌರಕಾರ್ಮಿಕರು. ಮೂರು ಪಾಳಿಯಲ್ಲಿ 400 ಮಂದಿ ಬೆಳಗ್ಗೆ 4 ಗಂಟೆಯಿಂದ ಮಧ್ಯರಾತ್ರಿ 3 ಗಂಟೆಯವರೆಗೆ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಒಂದೆಡೆ ಪೌರಕಾರ್ಮಿಕರ ಸೇವೆಯಾದರೆ, ಇನ್ನೊಂದೆಡೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಜಾತ್ರಾ ಮಹೋತ್ಸವದ ಯಶಸ್ವಿಗೆ ದುಡಿದಿದ್ದಾರೆ. ಕುಡಿಯುವ ನೀರು, ವಯೋವೃದ್ಧರು, ವಿಶೇಷಚೇತನರನ್ನು ವ್ಹೀಲ್‌ಚೇರ್‌ನಲ್ಲಿ ದೇವಾಲಯಕ್ಕೆ ಕರೆದುಕೊಂಡು ಹೋಗಿ ದೇವಿ ದರ್ಶನ ಮಾಡಿಸಿ ವಾಪಾಸ್ ಕಳುಹಿಸುತ್ತಿದ್ದಾರೆ. ಮಕ್ಕಳ ಸೇವೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ ಈ ಬಾರಿ ಹಾಸನ (Hassan) ನಗರ, ಪ್ರಮುಖ ರಸ್ತೆಯಲ್ಲಿರುವ ಸರ್ಕಾರಿ ಕಚೇರಿಗಳು ಮೈಸೂರು ದಸರಾ ಮಾದರಿಯಂತೆ ದೀಪಾಲಂಕಾರದಿಂದ ಮಿಂಚಿದವು. ಮುಖ್ಯರಸ್ತೆಗಳು ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಈ ಹಿಂದೆ ದೇವಾಲಯದ ಬಳಿ ಮತ್ತು ಪ್ರಮುಖ ವೃತ್ತಗಳಲ್ಲಿ ಮಾತ್ರ ಲೈಟಿಂಗ್ಸ್ ಅಳವಡಿಸಲಾಗುತ್ತಿತ್ತು. ಆದರೆ, ಕಳೆದ ಬಾರಿಯಿಂದ ಪ್ರಮುಖ ವೃತ್ತಗಳು ಸೇರಿ ಪ್ರಮುಖ ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡುವ ಮೂಲಕ ಇನ್ನಷ್ಟು ವರ್ಣರಂಜಿತಗೊಳಿಸಲಾಗಿದೆ. ಇದರ ಜೊತೆಗೆ ಹಾಸನ ನಗರದ ಮಹಾರಾಜ ಪಾರ್ಕ್ ಮುಂಭಾಗವಿರುವ ಹೇಮಾವತಿ ಪ್ರತಿಮೆ ಅದರ ಸುತ್ತಲೂ ಇರುವ ನೀರಿನ ಕಾರಂಜಿ ಪ್ರವಾಸಿಗರನ್ನು ರಂಜಿಸುತ್ತಿದೆ. ಬಣ್ಣದ ಬಣ್ಣದ ಕಾರಂಜಿ ನೋಡಿ ಭಕ್ತರು ಸಂತಸಪಡುತ್ತಿದ್ದಾರೆ.
ಭಾನುವಾರ ವಿಶ್ವರೂಪ ದರ್ಶನದ ನಂತರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಆದರೆ ಇಡೀ ಜಾತ್ರಾ ಮಹೋತ್ಸವದ ಯಶಸ್ವಿಗೆ ಪೌರಕಾರ್ಮಿಕರು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಕೊಡುಗೆ ಮಾತ್ರ ಅಪಾರವಾದದ್ದು. ಇನ್ನು ಹಾಸನಾಂಬೆ ಜಾತ್ರಾ ಮಹೋತ್ಸವ ದೀಪಾಲಂಕಾರ ಕಂಡು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರು ದೀಪಲಂಕಾರ ಕಂಡು ನಿಬ್ಬೆರಗಾಗಿದ್ದಾರೆ.ಇದನ್ನೂ ಓದಿ: ಬಲಿಪಾಡ್ಯಮಿ; ಬಲಿ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯ