ಹಾಸನ: ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯದ ಜೊತೆಗೆ ಜನರ ಸಾತ್ವಿಕ ಬೆಂಬಲ ಕೂಡ ಬೇಕಿದೆ ಎಂದು ಪೇಜಾವರ ಮಠದ ಸ್ವಾಮೀಜಿ ಹಾಗೂ ರಾಮ ಮಂದಿರ ಟ್ರಸ್ಟ್ ಸದಸ್ಯರಾದ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.
ಹಾಸನದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದ ಮೊದಲ ಸಭೆ ನಡೆದಿದೆ. ಅದಕ್ಕೆ ಒಂದು ಸಮಿತಿ ರಚನೆ ಆಗಲಿದೆ. ಅಯೋಧ್ಯೆಯಲ್ಲಿ ಎಸ್‍ಬಿಐ ಶಾಖೆಯಲ್ಲಿ ಒಂದು ಖಾತೆ ತೆರೆಯಲಾಗುತ್ತದೆ. ಈ ಖಾತೆಗೆ ಮಂದಿರ ಕಟ್ಟಲು ಯಾರು ಬೇಕಾದರೂ ಸಹಾಯ ಮಾಡಬಹುದು. 1 ರೂ. ನಿಂದ 1 ಕೋಟಿವರೆಗೂ ಯಾರು ಬೇಕಾದರೂ ಸಹಾಯ ಮಾಡಬಹುದು. ಈಗಾಗಲೇ ಪೇಜಾವರ ಗುರುಗಳ ಹೆಸರಿನಲ್ಲಿ ಮೊದಲನೆದಾಗಿ 5 ಲಕ್ಷ ರೂ. ನೀಡಲಾಯಿತು ಎಂದು ತಿಳಿಸಿದರು. ಇದನ್ನು ಓದಿ: ವ್ಯಾಟಿಕನ್ ಸಿಟಿ, ಮೆಕ್ಕಾ ಮಸೀದಿಗಿಂತಲೂ ವಿಸ್ತಾರವಾಗಿ ರಾಮ ಮಂದಿರ ನಿರ್ಮಾಣ
ಇದೇ ವೇಳೆ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣಕ್ಕೆ ಕೇವಲ ಧನ ಸಹಾಯ ಮಾತ್ರವಲ್ಲ. ಜನರಿಂದ ನಮಗೆ ಸಾತ್ವಿಕ ಬೆಂಬಲ ಬೇಕಿದೆ. ಪ್ರತಿ ಮನೆಯಲ್ಲಿ ರಾಮಜಪ ನಡೆಯಬೇಕಿದೆ. ಹಿಂದೆ ಪ್ರತಿ ಮನೆಯಲ್ಲಿ ರಾಮಜಪ ಸಂಸ್ಕಾರ ಇತ್ತು. ಈಗ ಎಲ್ಲಾ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.