ಹಾಸನ: ನಿಮ್ಮ ಪಿಎಸ್‍ಐನ ಎತ್ತಂಗಡಿ ಮಾಡಿಸಿದ್ದೇ ನಾವು ಎಂದು ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದ ಪೊಲೀಸರ ವಿರುದ್ಧವೇ ನಾಲ್ವರು ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿಯಲ್ಲಿ ಕೇಳಿ ಬಂದಿದೆ.
ಅರೆಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಪಿಸಿಗಳಾದ ಜಗದೀಶ್ ಮತ್ತು ಶಿವಶಂಕರ್ ಅವರು ಕೆನರಾ ಸ್ಟೋರ್ ಬಳಿ ಜನರು ಗುಂಪಾಗಿ ನಿಂತಿರುವುದನ್ನು ಗಮನಿಸಿ, ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳಿದ್ದಾರೆ. ಈ ವಿಷಯವಾಗಿ ರತ್ನಾಕರ, ಪ್ರಕಾಶ್, ಭರತ್ ಮತ್ತು ಸೋಮ ಎಂಬವರು ಪಿಸಿಗಳನ್ನು ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ ಕೋಮು ಸೌಹಾರ್ದ ಕದಡುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಅರೆಹಳ್ಳಿ ಪಿಎಸ್‍ಐ ಬಾಲು ಬಿಜೆಪಿ ಕಾರ್ಯಕರ್ತನೊಬ್ಬನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಈ ಬಗ್ಗೆ ಸಚಿವ ಸಿಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಪಿಎಸ್‍ಐ ಬಾಲು ಅವರನ್ನು ಹಾಜರಾತಿ ದೃಢೀಕರಣ ಪತ್ರ (ಒಒಡಿ) ಮೇಲೆ ಎಸ್‍ಪಿ ಆಫೀಸ್‍ಗೆ ಕೆಲಸಕ್ಕೆ ನಿಯೋಜಿಸಲಾಗಿತ್ತು. ಈ ವಿಷ್ಯವನ್ನು ಉದಾಹರಣೆಯಾಗಿ ನೀಡಿದ ಆರೋಪಿಗಳು, ನಿಮ್ಮ ಎಸ್‍ಐಯನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿದ್ದೇ ನಾವು ಎಂದು ನಿಂದಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ಬಗ್ಗೆ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಸಿಗಳು ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ನಾಲ್ವರು ಯುವಕರು ತಲೆ ಮರೆಸಿಕೊಂಡಿದ್ದು, ನಾಲ್ವರಲ್ಲಿ ಇಬ್ಬರು ರೌಡಿಶೀಟರ್ ಎಂಬುದಾಗಿ ತಿಳಿದು ಬಂದಿದೆ.