ಹಾಸನ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಬಳಿ ನಡೆದಿದೆ.
ಅಪಘಾತದಲ್ಲಿ ಸಿಗರನಹಳ್ಳಿ ನಿವಾಸಿಗಳಾದ 23 ವರ್ಷದ ಉಮೇಶ್ ಮತ್ತು 22 ವರ್ಷದ ಹರೀಶ್ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಹಾಸನದಿಂದ ತಮ್ಮ ಗ್ರಾಮಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ.
ಡಿಕ್ಕಿಯಾದ ಕಾರು ಇದೇ ತಾಲೂಕಿನ ಹರದನಹಳ್ಳಿಯ ಗ್ರಾಮದ ಅನಿಲ್ ಎಂಬವರಿಗೆ ಸೇರಿದ್ದಾಗಿದೆ. ಈ ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವಿಷಯ ತಿಳಿಯುತ್ತಿದ್ದ ಹಾಗೇ ಕಾರು ಮಾಲೀಕ ಅನಿಲ್ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.