– ಪೊಲೀಸರಿಂದ ತನಿಖೆ, ಕಿಡಿಗೇಡಿಗಳಿಗಾಗಿ ಬಲೆ
ಹಾಸನ: ಕೊರೊನಾ ಬಗ್ಗೆ ಆತಂಕ ಹೆಚ್ಚುತ್ತಿರುವಾಗಲೇ ಕಿಡಿಗೇಡಿಗಳು ಈ ಕುರಿತು ಇಲ್ಲಸಲ್ಲದ ವಿಡಿಯೋ ಹರಿಬಿಡುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.
ಹಾಸನ ನಗರದಲ್ಲಿ ಮೂವರು ದ್ರಾಕ್ಷಿ ಹಣ್ಣನ್ನು ಎಂಜಲು ಮಾಡಿ ವಾಹನಕ್ಕೆ ತುಂಬುತ್ತಿದ್ದಾರೆ ಎಂಬ ಬರಹದೊಂದಿಗೆ ವಿಡಿಯೋವೊಂದು ಹಾಸನದಲ್ಲಿ ವೈರಲ್ ಆಗಿತ್ತು. ಈ ಮೂಲಕ ಕಿಡಿಗೇಡಿಗಳು ಭೀತಿ ಉಂಟು ಮಾಡಲು ಯತ್ನಿಸಿದ್ದರು.
Advertisement
Advertisement
ಈ ವೇಳೆ ವ್ಯಕ್ತಿಯೊಬ್ಬ ದ್ರಾಕ್ಷಿ ಹಣ್ಣನ್ನು ಬಾಯಿ ಬಳಿ ತೆಗೆದುಕೊಂಡು ಹೋಗುವ ವಿಡಿಯೋವನ್ನು ವಾಟ್ಸಪ್‍ನಲ್ಲಿ ಹರಿ ಬಿಟ್ಟಿದ್ದರು. ವಾಹನದ ನಂಬರ್ ಸಹ ವಾಟ್ಸಪ್‍ನಲ್ಲಿ ಹಾಕಿ ಉದ್ದೇಶ ಪೂರ್ವಕವಾಗಿ ಎಂಜಲು ಮಾಡಿ ನಮಗೆ ಹಣ್ಣು ಮಾರುತ್ತಿದ್ದಾರೆ ಎಚ್ಚರ ಎಂದು ಆತಂಕ ಸೃಷ್ಟಿಸಿದ್ದರು. ಇದು ಹಾಸನ ಜಿಲ್ಲೆಯಾದ್ಯಂತ ಭೀತಿಗೆ ಕಾರಣವಾಗಿತ್ತು.
Advertisement
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿಡಿಯೋ ಪರಿಶೀಲನೆ ನಡೆಸಿ, ವಾಹನದ ನಂಬರ್ ಆಧರಿಸಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೂವರು, ನಾವು ಮೂವರು ದ್ರಾಕ್ಷಿ ಹಣ್ಣನ್ನು ತಿನ್ನುತ್ತಿದ್ದೆವು. ಅದನ್ನು ಯಾರೋ ಬೇಕಂತಲೇ ಚಿತ್ರೀಕರಿಸಿ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಸಾರ್ವಜನಿಕರ ಭಯ ಹೋಗಲಾಡಿಸಲು ಮೂವರನ್ನು ಆಸ್ಪತ್ರೆಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿದು ಬಂದಿದೆ. ದ್ರಾಕ್ಷಿ ಹಣ್ಣನ್ನು ಆಹಾರ ಪರಿವೀಕ್ಷಕರ ಪರಿಶೀಲನೆಗೆ ಕಳುಹಿಸಲಾಗಿದೆ. ಮೊಬೈಲ್‍ನಲ್ಲಿ ದ್ರಾಕ್ಷಿ ತಿನ್ನುವ ವಿಡಿಯೋ ಚಿತ್ರೀಕರಿಸಿ ಭಯ ಉಂಟು ಮಾಡಿರುವ ಕಿಡಿಗೇಡಿಗಳಿಗಾಗಿ ಪೊಳಿಸರು ಬಲೆ ಬೀಸಿದ್ದಾರೆ.