ಹಾಸನ: ತಡರಾತ್ರಿ ಸುರಿದ ಭಾರೀ ಮಳೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕರೆಕೋಡಿಹಳ್ಳಿ ಗ್ರಾಮದ ಕೆರೆ ಒಂದೇ ರಾತ್ರಿಗೆ ತುಂಬಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕಳೆದ ಕೆಲ ವರ್ಷದಿಂದ ಕೆರೆ ತುಂಬದೆ ಕೆರೆಕೋಡಿಹಳ್ಳಿ ಗ್ರಾಮಸ್ಥರು ಬಹಳ ತೊಂದರೆ ಅನುಭವಿಸುತ್ತಿದ್ದರು. ಆದರೆ ತಡರಾತ್ರಿ ಬಂದ ಭಾರೀ ಮಳೆಗೆ ಒಂದೇ ದಿನದಲ್ಲಿ ಕೆರೆ ಸಂಪೂರ್ಣ ತುಂಬಿದ್ದು, ಕೋಡಿ ಬಿದ್ದ ಕೆರೆಯ ನೀರು ಗದ್ದೆಗೆ ನುಗ್ಗಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಭತ್ತದ ಬೆಳೆ ನಾಶವಾಗಿದೆ.
ಅಚ್ಚರಿಯ ಸಂಗತಿ ಎಂದರೆ ನೂರಾರು ಎಕರೆ ವ್ಯಾಪ್ತಿಯಲ್ಲಿ ಇರುವ ಕೆರೆ ಹಲವು ವರ್ಷಗಳಿಂದ ಸಂಪೂರ್ಣ ತುಂಬಿರಲಿಲ್ಲ. ಆದರೆ ಈ ಭಾರಿ ಬಿದ್ದ ಮಳೆಗೆ ಒಂದೇ ರಾತ್ರಿಯಲ್ಲಿ ತುಂಬಿ ಹರಿದಿದ್ದು ಕೆರೆಕೋಡಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತಸ ತಂದಿದೆ. ಇದರ ಜೊತೆಗೆ ಕಟ್ಟೆಗಳೆಲ್ಲ ತುಂಬಿದ್ದು, ತೆಂಗಿನ ತೋಟಕ್ಕೆ ನೀರು ನುಗ್ಗಿದ ಪರಿಣಾಮ ಸ್ವಾಮಿ ಎಂಬುವರ ಎರಡು ಸಾವಿರ ತೆಂಗಿನ ಕಾಯಿಗಳು ನೀರಿನಲ್ಲಿ ತೇಲಿ ಹೋಗಿವೆ.
ಕೋಡಿ ಒಡೆದ ಪರಿಣಾಮವಾಗಿ ಭಾರೀ ಪ್ರಮಾಣದ ನೀರು ಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ನುಗ್ಗಿದೆ. ಇದರಿಂದ ಇತ್ತೀಚೆಗೆ ನಾಟಿ ಮಾಡಿದ್ದ ಕುಮಾರ್, ಕರೀಗೌಡ ಮತ್ತು ಪುಟ್ಟರಾಜ ಸೇರಿದಂತೆ ಸುತ್ತಮುತ್ತಲಿನ ಊರಿನ ರೈತರಿಗೆ ಸೇರಿದ ಸುಮಾರು 30 ಎಕ್ರೆ ಭತ್ತದ ಪೈರು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.