ಮೈಸೂರು: ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ..? ರಾಮನಗರ ಗಂಡನಿಗೆ, ಚೆನ್ನಪಟ್ಟಣ ಹೆಂಡ್ತಿಗೆ, ಮಂಡ್ಯ ಮಗನಿಗೆ, ಪಕ್ಕದ ಜಿಲ್ಲೆ ಹಾಸನ ಅಣ್ಣನ ಮಗನಿಗೆ.. ಗೌಡರೇನೂ ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ. ನಾವ್ಯಾರೂ ಸಹ ಬಾಂಡೆಡ್ ಲೇಬರ್ಸ್ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ.
ಮೊದಲು ಮನೆಯ ಕುಟುಂಬಸ್ಥರು ಆಸ್ತಿ ಭಾಗ ಮಾಡುವಾಗ ಮೇಲ್ಗಡೆ ಗದ್ದೆ ನಿನಗೆ, ಕೆಳಗಡೆ ತೋಟ ತಮ್ಮನಿಗೆ ಅಂತಾ ಹಂಚುತ್ತಿದ್ದರು. ಇದೀಗ ದೇವೇಗೌಡರು ಕರ್ನಾಟಕದ ಕ್ಷೇತ್ರಗಳನ್ನು ಮಕ್ಕಳು, ಮೊಮ್ಮಕಳಿಗೆ ಹಂಚುತ್ತಾ ಬರುತ್ತಿದ್ದಾರೆ. ದೇವೇಗೌಡ್ರ ಕುಟುಂಬಕ್ಕೆ ಮತ ಹಾಕಿದ್ರೆ ಅದು ಪ್ರೈವೇಟ್ ಪ್ರಾಪರ್ಟಿ ಇದ್ದ ಹಾಗೆ. ಬಿಜೆಪಿಗೆ ಮತ ಹಾಕಿದ್ರೆ ಅದು ದೇಶದ ಅಭಿವೃದ್ಧಿಗೆ. ಗೌಡರು ಎಂದ್ರೆ, ದೇವೇಗೌಡ್ರ ಕುಟುಂಬ ಮಾತ್ರ ಅಲ್ಲ. ಪ್ರತಾಪ್ ಸಿಂಹ, ನಾಗೇಂದ್ರ ಅವರು ಅಫ ಘಾನಿಸ್ತಾನದಿಂದ ಬಂದಿಲ್ಲ. ಅವರೆಲ್ಲಾನೂ ಕರ್ನಾಟಕದ ಗೌಡರೇ ಎಂದು ಹೇಳಿದರು.
Advertisement
Advertisement
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ದೇವೇಗೌಡರಿಗೆ ಈಗ 86 ಆಗಿದೆ, ಮುಂದಿನ ಎಲೆಕ್ಷನ್ ಟೈಮ್ ನಲ್ಲಿ 91 ಆಗಿರುತ್ತದೆ. 100 ವರ್ಷ ಪೂರ್ಣಗೊಂಡ ಬಳಿಕವೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಹುದು. ಜೆಡಿಎಸ್ ನಿಂದ ಸಂಸದರಾಗಿ ಹೊರಗಿನವರು ಇಬ್ಬರು. ಒಬ್ಬರು ಚಲುವರಾಯಸ್ವಾಮಿ ಮತ್ತೊಬ್ಬರು ಪುಟ್ಟರಾಜು. ಇವರಿಬ್ಬರು ದೇವೇಗೌಡರನ್ನು ಕೈ ಹಿಡಿದುಕೊಂಡು ಸಂಸತ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ಬಾರಿ ಅವರಿಬ್ಬರಿಗೂ ಅವಕಾಶ ನೀಡದೇ ಪ್ರಜ್ವಲ್ ಮತ್ತು ನಿಖಿಲ್‍ರನ್ನು ಊರುಗೋಲು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ವ್ಯಂಗ್ಯ ಮಾಡಿದರು.
Advertisement
ಮಂಡ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಆದ್ರೆ ಸಂಸತ್ತಿನಲ್ಲಿ ಈ ಬಗ್ಗೆ ಯಾರು ಮಾತನಾಡಲ್ಲ. ಇಷ್ಟು ವರ್ಷ ಕಳೆದರೂ ದೇವೇಗೌಡರಿಗೆ ಓರ್ವ ಸಮರ್ಥ ನಾಯಕನನ್ನು ಕೊಡಲು ಆಗಲಿಲ್ಲ. ಇದೀಗ ಮಂಡ್ಯಕ್ಕೆ ನಿಖಿಲ್ ಅಂತೆ, ಹಾಸನಕ್ಕೆ ಪ್ರಜ್ವಲ್ ಅಂತೆ ನಾಚಿಕೆ ಆಗಲ್ವಾ ನಿಮಗೆ ಎಂದು ಶ್ರೀನಿವಾಸ್ ಪ್ರಸಾದ್ ಆಕ್ರೋಶ ಹೊರ ಹಾಕಿದರು.
Advertisement
ದೇವೇಗೌಡರು ಮಾಜಿ ಪ್ರಧಾನಿಗಳು, ನಮಗೂ ಅವರ ಬಗ್ಗೆ ಗೌರವ ಇದೆಯೇ ಹೊರತು ನಂಬಿಕೆ ಇಲ್ಲ. ರಾಜ್ಯದ ಜನರು ಸಹ ದೇವೇಗೌಡರ ಬಗ್ಗೆ ಗೌರವ ಹೊಂದಿದ್ದು, ನಂಬಿಕೆಯನ್ನು ಇಟ್ಟುಕೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದಾರೆ. 37 ಸ್ಥಾನ ಇರೋ ನಮಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ ಎಂದು ದೇವೇಗೌಡರು ರಾಜಿಯಾಗಿದ್ದಾರೆ. ಮೈತ್ರಿಯಲ್ಲಿ ಸಮನ್ವಯತೆ ಇಲ್ಲ, ಆಡಳಿತಾತ್ಮಕ ಚಟುವಟಿಕೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮಾಜಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv