ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಗೆ ಸುಪಾರಿ ಕೊಟ್ಟು ಪ್ರೇಮಿ ಮೂಲಕ ತಂದೆಯನ್ನೇ ಕೊಲೆ ಮಾಡಿಸಿದ ಪಾಪಿ ಮಗಳು ಸೇರಿ ಮೂವರನ್ನು ಹಾಸನದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಾಗಮಂಗಲ ತಾಲೂಕಿನ ದೊಂದೆಮಾದನಹಳ್ಳಿಯ ವಿದ್ಯಾ (23), ಬೆಂಗಳೂರಿನ ಅಂಚೆಪಾಳ್ಯದ ಚಿದಾನಂದ್ (25) ಹಾಗು ರಘು (24) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮುನೇಶ್ವರ ನಗರದ ಮುನಿರಾಜು (48) ಕೊಲೆಯಾದ ತಂದೆ.
ಅಗಸ್ಟ್ 26 ರಂದು ಆಲೂರು ತಾಲೂಕಿನ ಮಣಿಗನಹಳ್ಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಿದ್ದ ಅಲೂರು ಪೊಲೀಸರು. ಈ ಪ್ರಕರಣದಲ್ಲಿ ಆತನ ಮಗಳು ವಿದ್ಯಾಳನ್ನು ತನಿಖೆ ಮಾಡಿದಾಗ ತನ್ನ ತಂದೆಯನ್ನು ತಾನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಮೂಲಕ ಘಟನೆ ನಡೆದ ಒಂದೇ ವಾರದೊಳಗೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ತನಿಖೆ ವೇಳೆ ನನಗೆ ಈ ಹಿಂದೆ ಅಪಘಾತವಾಗಿತ್ತು. ಅದರಿಂದ ಬಂದಿದ್ದ ಪರಿಹಾರ ಹಣ ಕೊಡು ಎಂದು ನನ್ನ ತಂದೆ ಕೇಳುತ್ತಿದ್ದರು ಅದಕ್ಕೆ 15 ಲಕ್ಷ ರೂ.ಗೆ ಸುಪಾರಿ ನೀಡಿ ನನ್ನ ತಂದೆಯನ್ನು ಕೊಲೆ ಮಾಡಿಸಿದೆ ಎಂದು ವಿದ್ಯಾ ಹೇಳಿದ್ದಾಳೆ. ಆದರೆ ಮುನಿರಾಜು ಮಗಳಿಂದ ಹಣ ಪಡೆಯುವ ವ್ಯಕ್ತಿ ಅಲ್ಲ. ವಿದ್ಯಾಳ ನಡುವಳಿಕೆ ಸರಿ ಇರಲಿಲ್ಲ. ಆಕೆ ಚಿದಾನಂದ್ ಜೊತೆ ಅಕ್ರಮ ಸಂಬಂಧ ಇಟ್ಟಿಕೊಂಡಿದ್ದಳು ಇದನ್ನು ತಂದೆ ವಿರೋಧ ಮಾಡಿದಕ್ಕೆ ಈ ರೀತಿ ಮಾಡಿದ್ದಾಳೆ ಎಂದು ಮುನಿರಾಜು ಕುಟುಂಬಸ್ಥರು ಆರೋಪ ಮಾಡಿದ್ದಾರೆ.