ಹಾಸನ: ಅರಕಲಗೂಡು ತಾಲೂಕಿನ ಶ್ರೀರಾಂಪುರದಲ್ಲಿ 75ಕ್ಕೂ ಹೆಚ್ಚು ಕೊರೊನಾ ಶಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಮುಂಗೈ ಮೇಲೆ ಸೀಲ್ ಹಾಕಲಾಗಿದೆ. ಜೊತೆಗೆ ಇಡೀ ಗ್ರಾಮಕ್ಕೆ ದಿಗ್ಬಂಧನ ವಿಧಿಸಲು ತಾಲೂಕು ಆಡಳಿತ ಚಿಂತನೆ ನಡೆಸುತ್ತಿದೆ.
ಪರಿಸ್ಥಿತಿಯ ಅವಲೋಕನ, ಪರಿಹಾರ ಮತ್ತು ಮುಂಜಾಗ್ರತ ಕ್ರಮಗಳ ಕುರಿತು ಚರ್ಚಿಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಬೀಡಿದ್ದಾರೆ. ಜೊತೆಗೆ ಗ್ರಾಮಸ್ಥರಿಂದ ಕೆಲವು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀರಾಂಪುರದ ಕೆಲವರು ಜ್ಯೋತಿಷ್ಯವನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿದ್ದು ಕೇರಳ, ಮಂಗಳೂರು, ಉಡುಪಿ ಮತ್ತು ಗೋವಾ, ಬಾಂಬೆ ಸೇರಿದಂತೆ ವಿವಿಧೆಡೆಯಿಂದ ವಾಪಸ್ ಆಗಿದ್ದಾರೆ.
Advertisement
ತಾಲೂಕಿನ ಜನ ಹೂವು, ತರಕಾರಿ ಮಾರಾಟ ಮಾಡಲು ಮಂಗಳೂರು, ಕೇರಳ, ಬೆಂಗಳೂರಿನೆಡೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಹಾಗೆಯೇ ಎಂಜಿನೀಯರಿಂಗ್, ವೈದ್ಯಕೀಯ, ನರ್ಸಿಂಗ್ ಇತ್ಯಾದಿ ಕೆಲಸಗಳನ್ನು ಮಾಡುವ ಜನರೂ ಬೆಂಗಳೂರು, ವಿವಿಧ ರಾಜ್ಯಗಳು ಮತ್ತು ಹೊರ ರಾಷ್ಟ್ರಗಳಿಂದ ಹಳ್ಳಿಗೆ ವಾಪಸ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮಕ್ಕೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ.