ಹಾಸನ: ಅಂಬುಲೆನ್ಸ್ ನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆ ಹಾಸನ ನಗರದ ಹೊಸಬಸ್ ನಿಲ್ದಾಣದ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತನನ್ನು ಕೃಷ್ಣಮೂರ್ತಿ(36) ಎಂದು ಗುರುತಿಸಲಾಗಿದೆ. ಕೃಷ್ಣಮೂರ್ತಿ ಅವರು ಎಂದಿನಂತೆ ಇಂದು ತಮ್ಮ ಬೈಕಿನಲ್ಲಿ ಎಂದಿನಂತೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಹೊಳೆನರಸೀಪುರ ಕಡೆಯಿಂದ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಲಾರಿ ಬೈಕಿಗೆ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರನ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳಗ್ಗೆ ಮನೆಯಿಂದ ಹೊಳೆನರಸೀಪುರ ತಾಲೂಕಿನ ಮೊಸಳೆಹೊಸಹಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ವಾಹನ ಸಂಚಾರವಿಲ್ಲದ ರಸ್ತೆಯಲ್ಲಿ ಅತಿವೇಗವಾಗಿ ಬಂದ ಲಾರಿ ಚಾಲಕನ ಅಜಾಗರೂಕತೆಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೊರೊನಾ ಸಮಯದಲ್ಲೂ ಎಂದಿನಂತೆ ಸೇವೆ ಸಲ್ಲಿಸಲು ತೆರಳುತ್ತಿದ್ದ ಅಂಬುಲೆನ್ಸ್ ಚಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.