ಹಾಸನ: ಜಿಲ್ಲೆಯ (Hassan) ವಿವಿಧೆಡೆ ಮಂಗಳವಾರ ರಾತ್ರಿ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಗೆ (Rain) ಅರಸೀಕೆರೆ (Arasikere) ತಾಲೂಕಿನ, ಕಣಕಟ್ಟೆ ಗ್ರಾಮದ 900 ಎಕರೆ ಪ್ರದೇಶದಲ್ಲಿರುವ ಬೃಹತ್ ಕೆರೆ (Kanakatte Lake) ಕೋಡಿ ಬಿದ್ದಿದೆ.
ಐದು ವರ್ಷದ ಹಿಂದೆ ಈ ಕೆರೆ ತುಂಬಿತ್ತು. ಅದರ ಬಳಿಕ ಮಳೆಯ ಕೊರತೆಯಿಂದ ಕೆರೆ ತುಂಬಿರಲಿಲ್ಲ. ಕೆರೆ ತುಂಬಿದ್ದರಿಂದ ಕಣಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.
– ಕೊಚ್ಚಿ ಹೋದ ಕಿರುಸೇತುವೆ, ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ
ಕಳೆದ ಒಂದು ವಾರದಿಂದ ಹಾಸನ ಜಿಲ್ಲೆಯ ವಿವಿಧೆಡೆ ರಾತ್ರಿ ವೇಳೆ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಕಿರುಸೇತುವೆ ಕೊಚ್ಚಿ ಹೋಗಿ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿರುವ ಆಲೂರಿನ ಸಿಂಗೊಂಡನಹಳ್ಳಿ ಬಳಿ ನಡೆದಿದೆ.
ಸಿಂಗೊಂಡನಹಳ್ಳಿ-ಪಾಳ್ಯ ನಡುವೆ ಹರಿಯುವ ಚಕ್ರತೀರ್ಥ ನದಿಯ ಕಿರು ಸೇತುವೆ ಕೊಚ್ಚಿ ಹೋಗಿದ್ದು, ಪಾಳ್ಯ, ಅರಾಳುಕೊಪ್ಪಲು, ಸಿಂಗೊಂಡನಹಳ್ಳಿ, ಹಾಚಗೊಂಡಹಳ್ಳಿ, ಮಲ್ಲೇನಹಳ್ಳಿ, ಅಬ್ಬನ ಮತ್ತು ಚಿನ್ನಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕವಿಲ್ಲದೇ ಗ್ರಾಮಸ್ಥರ ಪರದಾಡುವಂತಾಗಿದೆ.
ಸ್ಥಳಕ್ಕೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇತುವೆ ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಜೆಸಿಬಿ ಮೂಲಕ ಸೇತುವೆ ಪೈಪ್‌ಗಳಲ್ಲಿದ್ದ ಮರದ ತುಂಡು ಮತ್ತು ಕಸ ತೆರವು ಮಾಡಿ ನೀರು ಹರಿದು ಹೋಗುವಂತೆ ಮಾಡಲಾಯಿತು.