ಹಾಸನ: ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸಲಿರುವ ಹಾಸನದ ಅಧಿದೇವತೆ ಹಾಸನಾಂಬೆಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವ ಇಂದಿನಿಂದ ನ.15 ರವರೆಗೆ ನಡೆಯಲಿದೆ. ಆಶ್ವೀಜ ಮಾಸದ ಮೊದಲ ಗುರುವಾರ (ಇಂದು) ಮಧ್ಯಾಹ್ನ 12.30 ರ ನಂತರ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಗರ್ಭಗುಡಿಯ ಬಾಗಿಲು ತೆರೆದ ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಹದಿನೈದು ದಿನಗಳಲ್ಲಿ ಹದಿಮೂರು ದಿನಗಳು ಮಾತ್ರ 24*7 ಭಕ್ತರಿಗೆ ತಾಯಿ ಹಾಸನಾಂಬೆ ದರ್ಶನ ಕರುಣಿಸಲಿದ್ದಾಳೆ. ಈ ಬಾರಿ ಜಾತ್ರಾ ಮಹೋತ್ಸವ ವಿಶೇಷತೆಯಿಂದ ಕೂಡಿದ್ದು ಹೆಲಿಟೂರಿಸಂ, ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರ್, ಚಾಪರ್ ನಲ್ಲಿ ಹಾರಾಟ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
Advertisement
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಿ (Hasanamba) ಹಲವು ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಪ್ರತಿವರ್ಷ ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಹಾಗೂ ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜೊತೆಗೆ ಅಧಿದೇವತೆ ಬೇಡಿಕೊಂಡು ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ಅಚಲ ವಿಶ್ವಾಸ ಇರುವುದರಿಂದ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಅನೇಕ ಕಡೆಗಳಿಂದ ಲಕ್ಷಾಂತರ ಭಕ್ತರಿದ್ದಾರೆ. ವರ್ಷಕ್ಕೊಮ್ಮೆಯಷ್ಟೇ ಬಾಗಿಲು ತೆರೆಯುವ ಮೂಲಕ ರಾಜ್ಯದಲ್ಲೇ ವಿಶೇಷ ದೇವಾಲಯ ಎನಿಸಿರುವ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಒಂದು ದಿನ ಮಾತ್ರ ಬಾಕಿಯಿದೆ.
Advertisement
Advertisement
ಈ ಸಲದ ಉತ್ಸವಕ್ಕೆ ಇಂದು ಚಾಲನೆ ದೊರೆಯಲಿದ್ದು, ಆಶ್ವೀಜ ಮಾಸದ ಮೊದಲ ಗುರುವಾರ, ದೇವಾಲಯದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ಮೈಸೂರು ಅರಸು ವಂಶಸ್ಥರು ಗೊನೆ ಇರುವ ಬಾಳೆಕಂಬ ಕಡಿದ ಬಳಿಕ ಕಳೆದ ಒಂದು ವರ್ಷದಿಂದ ಮುಚ್ಚಿದ್ದ ದೇವಿಯ ಗರ್ಭಗುಡಿಯ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಥಳೀಯ ಶಾಸಕ ಎಚ್.ಪಿ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಗಣ್ಯರು ಗರ್ಭಗುಡಿ ಬಾಗಿಲು ತೆರೆಯುವ ವೇಳೆ ಹಾಜರಿರಲಿದ್ದಾರೆ. ಬಲಿಪಾಡ್ಯಮಿ ಮಾರನೇ ದಿನ ಶಾಸ್ತ್ರೋಕ್ತವಾಗಿ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
Advertisement
ಈ ಸಲ 24*7 ಮಾದರಿಯಲ್ಲಿ ದೇವಿ ದರ್ಶನಕ್ಕೆ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ನೇರ ದರ್ಶನ ಹಾಗೂ ಶೀಘ್ರ ದರ್ಶನಕ್ಕೆ ಸಾವಿರ, ಮುನ್ನೂರು ರೂಪಾಯಿ ಟಿಕೆಟ್ ವ್ಯವಸ್ಥೆ ಮುಂದುವರಿಸಲಾಗಿದೆ. ಈಗಾಗಲೇ ಇಡಿ ಹಾಸನ ನಗರ ದೀಪಾಲಂಕಾರದಿಂದ ಸಿಂಗಾರಗೊಂಡಿದೆ. ದೇವಾಲಯದ ಮುಂಭಾಗ ಹಾಗೂ ಇಡೀ ದೇವಾಲಯವನ್ನು ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಆಗಸದಿಂದ ಹಾಸನ ಚಾಪರ್ನಲ್ಲಿ ಒಂದು ಸುತ್ತು ಹಾಸನವನ್ನು ವೀಕ್ಷಿಸುವ ವ್ಯವಸ್ಥೆ ಕಲ್ಪಿಸಿದ್ದು ಏಳು ನಿಮಿಷಕ್ಕೆ ಒಬ್ಬರಿಗೆ 4300 ರೂ. ಹಣ ನಿಗದಿ ಮಾಡಲಾಗಿದೆ. ಅಲ್ಲದೇ ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರ್, ನಾಲ್ಕು ಟೂರ್ ಪ್ಯಾಕೇಜ್, ಸ್ವಂತ ವಾಹನಗಳಲ್ಲಿ ತೆರಳುವವರಿಗೆ ಚಾರಣ ವ್ಯವಸ್ಥೆ ಮಾಡಲಾಗಿದೆ. ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿವೆ. ದೇವಿ ದರ್ಶನದ ವೇಳೆ ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ಪಾಳೆಯದಲ್ಲಿ 1200 ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿರ್ವಹಿಸಲಿದ್ದಾರೆ. ಈ ಬಾರಿ ಹೊಸದಾಗಿ ತುಲಾಭಾರ, ಸ್ಕಾನಿಂಗ್ ಮೂಲಕ ದೇವರಿಗೆ ಕಾಣಿಕೆ ಅರ್ಪಿಸುವುದು, ಹಾಲು ಉಣಿಸುವ ಕೇಂದ್ರ, ಸರತಿ ಸಾಲಿನಲ್ಲಿ ಬರುವವರಿಗೆ ಮನರಂಜನೆಗಾಗಿ ಟಿವಿಗಳ ಮೂಲಕ ಮಹಾಭಾರತ ಪ್ರಸಾರ, ಕುಡಿಯುವ ನೀರು, ಐವತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಾಸನದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಈ ಬಾರಿ ಒಟ್ಟು ಹದಿನೈದು ದಿನಗಳಲ್ಲಿ ಹದಿಮೂರು ದಿನ ಮಾತ್ರ ಸಾರ್ವಜನಿಕ ದರ್ಶನ ಹಾಗೂ ಶಕ್ತಿ ಯೋಜನೆ ಜಾರಿ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಮಳೆ ಬಂದರೆ ಭಕ್ತರು ನೆನೆಯದಂತೆ ಜರ್ಮನ್ ಟೆಂಟ್, ಫ್ಯಾನ್, ಎಸಿ ಸೇರಿ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಭಾರಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಮೂರು ಹೊತ್ತು ಪ್ರಸಾದ ವಿತರಣೆ ವ್ಯವಸ್ಥೆ ಕಲ್ಪಿಸಿದೆ.
Web Stories