ಆವತ್ತು ರೆಬೆಲ್ ವಾರ್, ಇವತ್ತು ಕೂಲ್ ಅಟ್ಯಾಕ್- ವರ್ಗಾವಣೆ ದಂಧೆ ವಿರುದ್ಧ ಬದಲಾಯ್ತಾ HDK ಧೋರಣೆ?

Public TV
2 Min Read
HD KUMARASWAMY 2

ಬೆಂಗಳೂರು: ಕಾಂಗ್ರೆಸ್ (Congress) ವಿರುದ್ಧ ವರ್ಗಾವಣೆ/ಪೋಸ್ಟಿಂಗ್ ದಂಧೆ ಬಾಂಬ್ ಸಿಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಗ್ಯಾರಂಟಿ ವಿಚಾರದಲ್ಲಿ ಮಾತ್ರ ಕೂಲ್ ಕೂಲ್ ಅಟ್ಯಾಕ್. ವಿಧಾನಸಭೆಯಲ್ಲಿಂದು ಗ್ಯಾರಂಟಿಗಳ ವಿರುದ್ಧ ಹೆಚ್‍ಡಿಕೆ ಸಾಫ್ಟ್ ಅಟ್ಯಾಕ್ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ವರ್ಗಾವಣೆ ದಂಧೆ ವಿಚಾರ ಬಂದ್ರೂ ಪೆನ್‍ಡ್ರೈವ್ ಬಗ್ಗೆ ಹೇಳದೇನೇ ಚರ್ಚೆ ತೇಲಿಸುವ ಮೂಲಕ ಹೆಚ್‍ಡಿಕೆ ಯೂಟರ್ನ್ ಹೊಡೆದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ವರ್ಗಾವಣೆ ಮತ್ತು ಪೋಸ್ಟಿಂಗ್ ದಂಧೆ (Posting Scam) ಬಾಂಬ್ ಸಿಡಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ನಿದ್ದೆ ಕೆಡಿಸಿರೋದು ನಿಜ. ಕಳೆದ ವಾರ ಹೆಚ್‍ಡಿಕೆ ಪ್ರದರ್ಶಿಸಿದ ಪೆನ್‍ಡ್ರೈವ್ (Pendrive) ಇನ್ನೂ ಕುತೂಹಲ ಕಾಯ್ದುಕೊಂಡಿದೆ. ಆದರೆ ವರ್ಗಾವಣೆ ಆರೋಪ ವಿಚಾರದಲ್ಲಿ ಹೆಚ್‍ಡಿಕೆ ಧೋರಣೆ ಈಗ ಬದಲಾಗಿದೆಯಾ ಅನ್ನೋ ಅನುಮಾನ ಹುಟ್ಟಿದೆ. ಹೆಚ್‍ಡಿಕೆ ಯೂ ಟರ್ನ್ ಹೊಡೀತಿದ್ದಾರಾ ಅನ್ನೋ ಶಂಕೆಯೂ ಮೂಡ್ತಿದೆ. ಇದಕ್ಕೆ ಪುಷ್ಟಿ ಕೊಟ್ಟಿರೋದು ಇಂದಿನ ವಿಧಾನಸಭೆಯಲ್ಲಿ ಹೆಚ್‍ಡಿಕೆ ಅವರ ಮಾತಿನ ವರಸೆ. ಇದನ್ನೂ ಓದಿ: ಸಬ್ ರಿಜಿಸ್ಟರ್ ವರ್ಗಾವಣೆಯಲ್ಲಿ ಸಿಂಡಿಕೇಟ್ ಹಾವಳಿ ಇಲ್ಲದಂತೆ ನಿಯಮ ಜಾರಿ: ಕೃಷ್ಣಭೈರೇಗೌಡ

ಕಲಾಪದಲ್ಲಿಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸರ್ಕಾರದ ವಿರುದ್ಧ ಹೆಚ್‍ಡಿಕೆ ಸಾಫ್ಟ್ ಅಟ್ಯಾಕ್ ಮಾಡಿದ್ರು. ಪಂಚ ಗ್ಯಾರಂಟಿಗಳ (5 Guarantee) ಜಾರಿ ವಿಳಂಬ, ಗೊಂದಲಗಳ ಬಗ್ಗೆ ಮಾತಾಡಿದ ಹೆಚ್‍ಡಿಕೆ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಲೇ ಇಲ್ಲ. ಬದಲಾಗಿ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಸರ್ಕಾರ ನುಡಿದಂತೆ ನಡೆದಿಲ್ಲ ಅಂತ ಹೇಳಕ್ಕಾಗಲ್ಲ. ಸರ್ಕಾರ ಸಂಪೂರ್ಣ ಮಾತು ತಪ್ಪಿಲ್ಲ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ್ರು. ಶಕ್ತಿ ಯೋಜನೆ ಜಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹೆಚ್‍ಡಿಕೆ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳಲ್ಲಿ ಸರ್ಕಾರಕ್ಕೆ ಕೆಲ ಸಲಹೆಗಳನ್ನು ಕೊಟ್ರು.

ಗ್ಯಾರಂಟಿ ಗೊಂದಲಗಳ ಬಗ್ಗೆ ಮಾತಾಡುವಾಗಲೇ ಇಲಾಖೆಯೊಂದರಲ್ಲಿ ವರ್ಗಾವಣೆ ದಂಧೆ ನಡೀತಿದೆ ಎಂದು ಹೆಚ್‍ಡಿಕೆ ಗಂಭೀರ ಆರೋಪ ಮಾಡಿದರು. ಇಲಾಖೆ ಮತ್ತು ಸಚಿವರ ಹೆಸರೇಳದೇ ಪೋಸ್ಟಿಂಗ್ ಗಳಿಗೆ ನಿರ್ದಿಷ್ಟ ಪರ್ಸೆಂಟೇಜ್ ದರಗಳು ಫಿಕ್ಸ್ ಮಾಡಲಾಗಿದೆ ಎಂದು ಹೆಚ್‍ಡಿಕೆ ಆರೋಪ ಮಾಡಿದ್ರು. ಈ ಸಂಬಂಧ ದಾಖಲೆ ಪತ್ರ ತೋರಿಸಿದ ಹೆಚ್‍ಡಿಕೆ ಇದರಲ್ಲಿ ಪರ್ಸೆಂಟೇಜ್ ವಿವರ ಇದೆ, ಸಿಎಂಗೆ ಕಳಿಸಿಕೊಡ್ತೀನಿ ಅಂದ್ರು. ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರೂ ಹೆಚ್‍ಡಿಕೆ ವರ್ತನೆ ಶಾಂತರೂಪದಲ್ಲೇ ಇತ್ತು. ಸದನದಲ್ಲಿ ವರ್ಗಾವಣೆ ದಂಧೆ ಬಗ್ಗೆ ಈ ಮುಂಚೆ ರೆಬೆಲ್ ಆಗಿ ಪೆನ್‍ಡ್ರೈವ್ ಪ್ರದರ್ಶಿಸಿ ರೋಷಾವೇಶ ತೋರಿಸಿದ್ದ ಹೆಚ್‍ಡಿಕೆ ಇವತ್ತು ಮಾತ್ರ ಸಾಫ್ಟ್ ನಡೆ ತೋರಿದ್ರು. ಪೆನ್‍ಡ್ರೈವ್ ವಿಚಾರವಂತೂ ಪ್ರಸ್ತಾಪಿಸಲೇ ಇಲ್ಲ. ವರ್ಗಾವಣೆ ದಂಧೆ ವಿಚಾರದಲ್ಲಿ ಹೆಚ್‍ಡಿಕೆ ಯೂ-ಟರ್ನ್ ಹೊಡೀತಿದ್ದಾರಾ ಅಂತ ಸದನದಲ್ಲಿದ್ದವರಿಗೆ ಒಂದು ಕ್ಷಣ ಅನಿಸದಿರಲಿಲ್ಲ.

ಸದ್ಯ ಹೆಚ್‍ಡಿಕೆ ಅವರ ನಡೆ-ನುಡಿ ಅಚ್ಚರಿಗೆ ಕಾರಣವಾಗಿದೆ. ಒಮ್ಮೆ ರೆಬೆಲ್ ಮತ್ತೊಮ್ಮೆ ಕೂಲ್ ಆಗಿ ಮಾತಾಡುವ ಹೆಚ್‍ಡಿಕೆ ಒಗ್ಗಟ್ಟಾಗಿದ್ದಾರೆ. ಬಿಜೆಪಿ ಸದಸ್ಯರಂತೂ ಹೆಚ್‍ಡಿಕೆ ಅವರ ಈ ಹೊಸ ರೂಪ ನೋಡಿ ಕಕ್ಕಾಬಿಕ್ಕಿಯಾಗಿ ಏಕದಂ ಮೌನಕ್ಕೆ ಶರಣಾಗಿದ್ದಾರೆ.

Web Stories

Share This Article