ಚಂಡೀಗಡ: ಹರ್ಯಾಣದ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಶಾಲೆಗೆ ಹೋಗುವಾಗ ಪ್ರತಿದಿನ ಎದುರಿಸಬೇಕಾದ ಕಿರುಕುಳದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
7 ರಿಂದ 12 ನೇ ತರಗತಿಯವರೆಗಿನ ಮಾನೇಸರ್ ನ ಸರ್ಕಾರಿ ಶಾಲೆಯ ಐದು ವಿದ್ಯಾರ್ಥಿನಿಯರು, ತಮ್ಮ ಶಾಲೆಗೆ ಭದ್ರತಾ ಸಿಬ್ಬಂದಿ ನೇಮಕವಾಗಿಲ್ಲ. ನಮ್ಮ ಶಾಲೆಗೆ ಕಾಪೌಂಡ್ ಇಲ್ಲ. ಅದ್ದರಿಂದ ನಮ್ಮ ಶಾಲೆಗೆ ಹೊರಗಿನಿಂದ ಯುವಕರು ಬಂದು ಕಿರುಕುಳ ನೀಡುತ್ತಾರೆ. ನಮಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.
Advertisement
Advertisement
ವರದಿಯ ಪ್ರಕಾರ ಈ ಶಾಲೆಯಲ್ಲಿ ಸುಮಾರು 600 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ತಡೆಗೋಡೆ ಇಲ್ಲವಾದರಿಂದ ಅವರಣದೊಳಗೆ ಯಾರು ಬೇಕಾದರು ಬರಬಹುದು. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ಯುವಕರು ಕುಡಿದು ಶಾಲೆಯ ಅವರಣಕ್ಕೆ ಬಂದು ಹುಡುಗಿಯರನ್ನು ಚುಡಾಯಿಸುವುದು, ಕೆಟ್ಟ ಪದಗಳಲ್ಲಿ ನಿಂದಿಸುವುದು ಮಾಡುತ್ತಾರೆ ಎನ್ನಲಾಗಿದೆ.
Advertisement
ಈ ಶಾಲಾ ಕಾಪೌಂಡ್ ಒಳಗೆ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಚಾಯತ್ ಕಟ್ಟಡ, ಅಂಗನವಾಡಿ ಮತ್ತು ಉದ್ಯಾನವನವಿದೆ. ಹಾಗಾಗಿ ಇಲ್ಲಿಗೆ ಯಾವಾಗಲು ಜನರು ಬರುತ್ತಿರುತ್ತಾರೆ. ಇದರಲ್ಲಿ ಕೆಲ ಯುವಕರು ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಬೇಸತ್ತ ಬಾಲಕಿಯರು ಈಗ ಕೋರ್ಟ್‍ಗೆ ಹೋಗಿದ್ದಾರೆ.
Advertisement
“ನಮ್ಮ ಶಾಲಾ ಆವರಣವನ್ನು ಶೈಕ್ಷಣಿಕೇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಸರಿಯಾದ ತಡೆ ಗೋಡೆಯ ಕೊರತೆಯಿಂದಾಗಿ, ಸಮಾಜವಿರೋಧಿ ಅಂಶಗಳು ಶಾಲಾ ಆವರಣಕ್ಕೆ ಸುಲಭವಾಗಿ ಪ್ರವೇಶಿಸುತ್ತೀವೆ. ಈ ರೀತಿಯ ತೊಂದರೆಯಿಂದ ಶಾಲಾ ಆಡಳಿತ ಮಂಡಳಿ ಆಟದ ವ್ಯವಸ್ಥೆಯನ್ನು ಶಾಲೆಯ ಒಳಗೆ ಮಾಡಿದೆ” ಎಂದು ವಿದ್ಯಾರ್ಥಿನಿಯರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಈ ವಾರದ ಆರಂಭದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು.
ಇದು ನಮ್ಮ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಈ ವಿಚಾರವಾಗಿ ಪದೇ ಪದೇ ಮನವಿಯನ್ನು ಮಾಡಿದ್ದರು ನಿರ್ಲಕ್ಷಿಸಿದ್ದಾರೆ ಎಂದು ಬಾಲಕಿಯರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 2 ರೊಳಗೆ ಪ್ರತಿಕ್ರಿಯೆ ನೀಡುವಂತೆ ಹರ್ಯಾಣ ಸರ್ಕಾರಕ್ಕೆ ಸೂಚಿಸಿದೆ.