ಚಂಢೀಗಡ: ಪಕ್ಷದಿಂದ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ (BJP) ಮಾಜಿ ಶಾಸಕ ಶಶಿ ರಂಜನ್ ಪರ್ಮಾರ್ ಸಂದರ್ಶನವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.
ಮುಂಬರುವ ಹರ್ಯಾಣ (Haryana) ವಿಧಾನಸಭಾ ಚುನಾವಣೆಯ (Assembly Elections) ಅಭ್ಯರ್ಥಿಗಳ ಪಟ್ಟಿಯಿಂದ ಅವರ ಹೆಸರನ್ನು ಹೊರಗಿಟ್ಟಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಈ ವೇಳೆ ಪಟ್ಟಿಯಲ್ಲಿ ನನ್ನ ಹೆಸರೇ ಇರಬಹುದು ಎಂದುಕೊಂಡಿದ್ದೆ ಎಂದು ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಬಳಿಕ ಮಾತನಾಡಿ, ನನ್ನ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂದು ಜನರಿಗೆ ಭರವಸೆ ನೀಡಿದ್ದರು. ನಾನೀಗ ಏನು ಮಾಡಬೇಕು? ನಾನು ಅಸಹಾಯಕನಾಗಿದ್ದೇನೆ. ನನ್ನನ್ನು ನಡೆಸಿಕೊಂಡ ರೀತಿಯಿಂದ ತುಂಬಾ ನೋವಾಗಿದೆ. ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ? ಎಂದು ಅವರು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹರ್ಯಾಣದಲ್ಲಿ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.
ನಾಮಪತ್ರಗಳನ್ನು ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 13 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಸೆಪ್ಟೆಂಬರ್ 16 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.