ಇಸ್ಲಾಮಾಬಾದ್: ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್‍ನಲ್ಲಿ ಭಾರತದ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಸೇರಿದಂತೆ ಬಹುತೇಕ ಆಟಗಾರರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹಿಂಬಾಲಿಸುತ್ತಿದ್ದಾರೆ. ಹಾಗಾಗಿ ಅವರ ಆಟದ ಶೈಲಿ ಬದಲಾಗಿದೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಲತೀಫ್, ಭಾರತ ತಂಡದಲ್ಲಿರುವ ಬಹುತೇಕ ಆಟಗಾರರು ಈ ಹಿಂದೆ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಕೊಹ್ಲಿಯನ್ನು ಹಿಂಬಾಲಿಸುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಪಂತ್, ಸೂರ್ಯಕುಮಾರ್ ಯಾದವ್, ಪಾಂಡ್ಯ ಸೇರಿದಂತೆ ಬಹುತೇಕ ಆಟಗಾರರು ಧೋನಿಯನ್ನು ಹಿಂಬಾಲಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕೊಹ್ಲಿ – 1 ಓವರ್ 6 ರನ್
ಈ ಹಿಂದಿನಂತೆ ಸಚಿನ್, ಸೆಹ್ವಾಗ್ ಮತ್ತು ಕೊಹ್ಲಿಯ ಬಗ್ಗೆ ಆಟಗಾರರಿಗೆ ಗೌರವ ಇದೆ ಆದರೆ ಧೋನಿಯಂತೆ ಆಡಬೇಕೆಂಬ ಬಯಕೆಯೊಂದಿಗೆ ಅವರನ್ನು ಹಿಂಬಾಲಿಸುತ್ತಿದ್ದಾರೆ ಹಾಗಾಗಿ ತಂಡದಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಇದು ತಂಡದ ಪ್ರದರ್ಶನದ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಯಕ್ಕೆ ಮರಳಿದ ರನ್ ಮಿಷಿನ್ ಕೊಹ್ಲಿಯಿಂದ ಮತ್ತೊಂದು ಸಾಧನೆ
ಏಷ್ಯಾಕಪ್‍ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಮುಖ ಆಟಗಾರರ ಭರ್ಜರಿ ಪ್ರದರ್ಶನದಿಂದ ಭಾರತ ಸೂಪರ್ ಫೋರ್ ಹಂತಕ್ಕೆ ಲಗ್ಗೆ ಇಟ್ಟಿದೆ. ಕೂಟದ ಮೊದಲೆರಡು ಪಂದ್ಯಗಳನ್ನು ಭಾರತ ಗೆದ್ದುಬೀಗಿದೆ. ಪಾಕಿಸ್ತಾನ ವಿರುದ್ಧ ಪಾಂಡ್ಯ ಪವರ್ ಫುಲ್ ಹಿಟ್‍ಗಳಿಂದ ಗಮನಸೆಳೆದರೆ, ಹಾಕಾಂಗ್ ವಿರುದ್ಧ ಸೂರ್ಯಕುಮಾರ್ ಯಾದವ್ ಮತ್ತು ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.