ಅಂದು ಅವಮಾನ, ಇಂದು ಸನ್ಮಾನ – ಟೀಕಿಸಿದ್ದ ಜನರೇ ಜೈಕಾರ ಕೂಗಿದ್ರು; ಭಾವುಕನಾದ ಪಾಂಡ್ಯ

Public TV
2 Min Read
Pandya

ಮುಂಬೈ: ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ನಡೆದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಭಾರತೀಯ ಆಟಗಾರರ ಪರ ಅಭಿಮಾನಿಗಳು ಜೈಕಾರ ಕೂಗಿದರು. ಇದರಲ್ಲಿ ವಿಶೇಷ ಅನಿಸಿದ್ದು ಹಾರ್ದಿಕ್‌ ಪಾಂಡ್ಯ. ಏಕೆಂದರೆ 2024ರ ಐಪಿಎಲ್‌ ಟೂರ್ನಿ ವೇಳೆ ಇದೇ ಮೈದಾನದಲ್ಲಿ ಪಾಂಡ್ಯ ಪ್ರೇಕ್ಷಕರು ಹಾಗೂ ರೋಹಿತ್‌ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಅಂದು ಅವಮಾನಿಸಿದ್ದ ಜಾಗದಲ್ಲೇ ಇಂದು ಸನ್ಮಾನ ದೊರೆಯಿತು. ಟೀಕಿಸಿದ್ದ ಅಭಿಮಾನಿಗಳೇ ಜೈಕಾರ ಕೂಗಿದ್ದನ್ನು ಕಂಡು ಹಾರ್ದಿಕ್‌ ಭಾವುಕರಾದರು.

ಹೌದು. 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಫ್ರಾಂಚೈಸಿ ಹೊಸ ನಾಯಕತ್ವ ತರಲು ಬಯಸಿತ್ತು. ಅದಕ್ಕಾಯೇ ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್‌ ಪಾಂಡ್ಯ ಅವರನ್ನು ಮತ್ತೆ ತವರು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಟಿ20 ವಿಶ್ವಕಪ್‌ ಒತ್ತಡವನ್ನೂ ನಿಭಾಯಿಸಬೇಕಿದ್ದ ಕಾರಣ,‌ 5 ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಟ್ಟ ರೋಹಿತ್‌ ಶರ್ಮಾರನ್ನು ಬಿಟ್ಟು ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡಲಾಯಿತು. ಆದ್ರೆ ನಾಯಕತ್ವದ ಹೊಣೆ ಹೊತ್ತ ಭರದಲ್ಲಿ ಹಾರ್ದಿಕ್‌ ಪಾಂಡ್ಯ ಅವರು ಫೀಲ್ಡ್‌ನಲ್ಲಿ ರೋಹಿತ್‌ರನ್ನು ನಡೆಸಿಕೊಂಡ ರೀತಿ ಭಾರೀ ಟೀಕೆಗೆ ಗುರಿಯಾಗುವಂತೆ ಮಾಡಿತ್ತು.

Team India Mumbai 3

ಒಂದೊಮ್ಮೆ ಪಂದ್ಯದ ಮಧ್ಯದಲ್ಲೇ ನಾಯಿಯೊಂದು ಮೈದಾನ ಪ್ರವೇಶಿಸಿತ್ತು, ಈ ವೇಳೆ ಪ್ರೇಕ್ಷಕರು ಅದನ್ನು ಹಾರ್ದಿಕ್‌, ಹಾರ್ದಿಕ್‌ ಎಂದು ಕೂಗಿ ಅವಮಾನಿಸಿದ್ದರು. ಇದ್ಯಾ‌ವುದಕ್ಕೂ ಕುಗ್ಗದ ಪಾಂಡ್ಯ ತಮ್ಮ ಪ್ರದರ್ಶನ ಮುಂದುವರಿಸಿದರು. ಆದ್ರೆ ಸತತ ಸೋಲುಗಳಿಂದಾಗಿ ಮುಂಬೈ ತಂಡ ಲೀಗ್‌ ಸುತ್ತಿನಲ್ಲಿ ಹೊರಬಿದ್ದಿತು. ಇದರಿಂದ ಪಾಂಡ್ಯ ನಾಯಕತ್ವದ ಬಗ್ಗೆಯೂ ಭಾರೀ ಟೀಕೆ ವ್ಯಕ್ತವಾಗಿತ್ತು. ಇಂದು ಅದೇ ಮೈದಾನದಲ್ಲಿ ಪಾಂಡ್ಯ ಸನ್ಮಾನ ಸ್ವೀಕರಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಅಂತಿಮ ಓವರ್‌ನಲ್ಲಿ ಪಾಂಡ್ಯ ಅವರ ಚಾಣಾಕ್ಷ ಬೌಲಿಂಗ್‌ ಭಾರತಕ್ಕೆ ಗೆಲುವು ತಂದುಕೊಟ್ಟಿತು. ನಿರ್ಣಾಯಕ ಸಮಯದಲ್ಲಿ ಹೆನ್ರಿಕ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು. ಹೀಗಾಗಿ ಭಾರತದ ಟಿ 20 ವಿಶ್ವಕಪ್ ಗೆಲುವಿನ ನಂತರ ಪಾಂಡ್ಯ ಅವರ ಜೀವನವು ಅನೇಕ ರೀತಿಯಲ್ಲಿ ಬದಲಾವಣೆ ಕಂಡಿತು.

Team India Mumbai 1 1

ಕಠಿಣ ದಿನಗಳನ್ನು ನೆನಪಿಸಿಕೊಂಡ ಪಾಂಡ್ಯ
ಪಂದ್ಯದ ಬಳಿಕ ಮಾತನಾಡಿದ್ದ ಪಾಂಡ್ಯ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದರು. ಇದು ತುಂಬಾ ಭಾವನಾತ್ಮಕ ಕ್ಷಣ. ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಇಂದು ಇಡೀ ರಾಷ್ಟ್ರವು ಬಯಸಿದ್ದನ್ನ ನಾವು ಪೂರೈಸಿದ್ದೇವೆ. ಇದು ನನಗೆ ಹೆಚ್ಚು ವಿಶೇಷವಾಗಿದೆ. ಏಕೆಂದರೆ ನನ್ನ ಕೊನೆಯ 6 ತಿಂಗಳು ಕಷ್ಟಕರವಾಗಿದ್ದವು ಎಂದು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು.

Share This Article