ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಮತ್ತೆ ಬಿರುಸು ಪಡೆದಿದ್ದು ಹಾರಂಗಿ ಜಲಾಶಯದಿಂದ (Harangi Dam) ಒಂದು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.
ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆ 4 ಕ್ರಸ್ಟ್ ಗೇಟ್‌ಗಳನ್ನು ತೆರೆದು 1 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಅಳಿಯನಿಗೆ ಕೊರಗಿತ್ತು: ಬಿಸಿ ಪಾಟೀಲ್
ಜಲಾಶಯ ತುಂಬಲು ಇನ್ನೂ 10 ಅಡಿಗಳು ಬಾಕಿ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಬಿರುಸು ಪಡೆಯುವ ಸಾಧ್ಯತೆ ಇರುವುದರಿಂದ ಕುಶಾಲನಗರ (Kushalnagar) ಹಾಗೂ ನದಿ ದಂಡೆಯ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಜಲಾಶಯ ಭರ್ತಿಗೂ ಮುನ್ನವೇ ನೀರನ್ನು ಹೊರಬಿಡಲಾಗುತ್ತಿದೆ.
ಪ್ರಸ್ತುತ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಇದ್ದು, ಇಂದಿನ ನೀರಿನ ಮಟ್ಟ 2848.76 ಅಡಿ ಇದೆ. 2,394 ಕ್ಯೂಸೆಕ್ ಒಳ ಹರಿವಿದೆ. ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡುವ ವೇಳೆಯಲ್ಲಿ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ತಹಶೀಲ್ದಾರ್ ಕಿರಣ್ ಗೌರಯ್ಯ, ಕಾಡಾ ಅಧೀಕ್ಷಕ ಎಂಜಿನಿಯರ್ ರಘುಪತಿ, ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು. Dengue Cases Alert: ರಾಜ್ಯದಲ್ಲಿಂದು 197 ಕೇಸ್ ದಾಖಲು – ಪ್ರಕರಣಗಳ ಸಂಖ್ಯೆ 7,362ಕ್ಕೆ ಏರಿಕೆ!
ಹಾರಂಗಿ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿರುವ ಕೆಆರ್‌ಎಸ್ ಜಲಾಶಯದ (KRS Dam) ಒಳ ಹರಿವು ಹೆಚ್ಚಾಗಲಿದೆ.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.