ನವದೆಹಲಿ: ಕ್ರೀಡಾಂಗಣದಲ್ಲಿ ಹಲವು ಬಾರಿ ನೇರ ಹಣಾಹಣಿ ನಡೆಸಿದ್ದ ಪಾಕ್ ಮಾಜಿ ಆಟಗಾರ ಇಮ್ರಾನ್ ಖಾನ್ ಚುನಾವಣೆಯಲ್ಲಿ ಯಶಸ್ವಿಯಾಗಿದ್ದು ಖುಷಿ ತಂದಿದೆ. ಆದರೆ ಎರಡು ದೇಶಗಳ ನಡುವಿನ ಉತ್ತಮ ಸಂಬಂಧ ಬೆಳವಣಿಗೆ ಮುಖ್ಯ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ವಿಶ್ವದ ಹಲವು ಕ್ರಿಕೆಟ್ ಅಭಿಮಾನಿಗಳು ಭಾರತ ಹಾಗೂ ಪಾಕ್ ನಡುವೆ ಹೆಚ್ಚಿನ ಕ್ರಿಕೆಟ್ ಪಂದ್ಯಗಳು ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಇದಕ್ಕೂ ಮುನ್ನ ದೇಶದ ನಡುವೆ ಉತ್ತಮ ಸಂಬಂಧ ಉಂಟಾಗುವುದು ಮುಖ್ಯ. ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಯಾಗುವ ಕುರಿತ ವಿಶ್ವಾಸವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇಮ್ರಾನ್ ಯಶಸ್ಸಿನ ಕುರಿತು ತಾನು ಸಂತಸನಾಗಿದ್ದೇನೆ. ಪಾಕ್ ಕ್ರಿಕೆಟ್ ತಂಡವನ್ನು ಇಮ್ರಾನ್ ಮುನ್ನಡೆಸಿದ್ದ ರೀತಿ ತಮ್ಮಲ್ಲಿ ವಿಶ್ವಾಸ ಮೂಡಿಸಿದೆ. ಹಿಂದಿನಿಂದಲೂ ಇಮ್ರಾನ್ ಸಕ್ಸಸ್ ಪಡೆಯಲು ಸಾಕಷ್ಟು ಶ್ರಮವಹಿಸಿದ್ದಾರೆ. ಅವರಿಗೆ ಈ ಕಾರ್ಯವನ್ನು ನಿರ್ವಹಿಸುವ ಶಕ್ತಿ ಇರುವುದರಿಂದ ರಾಜಕೀಯ ಜೀವನದ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನ ತಂಡದ ನಾಯಕತ್ವ ವಹಿಸಿದ ಇಮ್ರಾನ್ ಗೆ ಆಟಗಾರರನ್ನು ನಿರ್ವಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆ ವೇಳೆ ಪಾಕ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲು ಇಮ್ರಾನ್ ನಾಯಕತ್ವ ಕಾರಣ. ಆದ್ದರಿಂದ ಪಾಕ್ ಮುಂದಿನ ಪ್ರಧಾನಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದರು.