ಕೊಪ್ಪಳ: ಹನುಮ ಜನಿಸಿದ ನಾಡು ಕೊಪ್ಪಳದಲ್ಲಿ ಪ್ರತಿ ವರ್ಷದಂತೆ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.
ಪ್ರತಿ ವರ್ಷ ಹನುಮ ಜಯಂತಿಯಂದು ಭಕ್ತರು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸ್ತಾರೆ. ವ್ರತ ಕೈಗೊಂಡ ಭಕ್ತರು ಇಲ್ಲಿಗೆ ಬಂದು ಹನುಮ ಮಾಲೆಯನ್ನು ವಿಸರ್ಜನೆ ಮಾಡ್ತಾರೆ. ಅಂಜನಾದ್ರಿ ಬೆಟ್ಟದಲ್ಲಿ ಬೆಳಗ್ಗೆ ಎರಡು ಗಂಟೆಯಿಂದಲೇ ನಿರ್ಮಲ ಸೇವೆ, ಅಲಂಕಾರ, ಸಹಸ್ರನಾಮಾವಳಿ ಪಠಣ, ಹನುಮಸ್ತೋತ್ರ ಪಠಣದಂತ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ.
Advertisement
Advertisement
ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಪೈಕಿ ಕೆಲವರು ರಾತ್ರಿಯೇ ಬೆಟ್ಟಕ್ಕೆ ಆಗಮಿಸಿದ್ದರು. ಮತ್ತಷ್ಟು ಭಕ್ತರು ಬೆಳಗ್ಗೆ ಎರಡು ಗಂಟೆಯಿಂದಲೇ ಗಂಗಾವತಿ ನಗರದಿಂದ ಪಾದಯಾತ್ರೆ ನಡೆಸಿ ಬೆಟ್ಟವೇರಿದರು. ರಾಜ್ಯದ ಜಿಲ್ಲೆಗಳಾದ ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ರಾಯಚೂರು, ಬೀದರ್, ಗುಲ್ಬರ್ಗ, ಯಾದಗಿರಿ, ಬಾಗಲಕೋಟೆ, ವಿಜಯಪುರದಿಂದ ಅಂದಾಜು 25 ಸಾವಿರಕ್ಕೂ ಹೆಚ್ಚು ಭಕ್ತರು 575 ಮೆಟ್ಟಿಲು ಹೊಂದಿರುವ ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದರು.
Advertisement
ಕಳೆದ ಬಾರಿ ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವೆ ಗಲಭೆಯಾಗಿ ಗಂಗಾವತಿಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು. ಸತತ 1 ವಾರಗಳ ಕಾಲ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದರಿಂದ ಮುನ್ನೆಚ್ಚರಿಕೆಯಾಗಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು. ಇದರಿಂದ ಈ ಬಾರಿ ಹನುಮ ಮಾಲಾಧಾರಿಗಳು ಮೆರವಣಿಗೆ ಮಾಡುವ ಸಂಭ್ರಮಕ್ಕೆ ಪೊಲೀಸರು ಕೊಕ್ಕೆ ಹಾಕಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.
Advertisement
ಈದ್ ಮಿಲಾದ್ ಹಬ್ಬವು ಇದೇ ಸಮಯದಲ್ಲಿ ಇರುವುದರಿಂದ ಯಾವುದೇ ರೀತಿ ಕೋಮು ಗಲಭೆ ಆಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ಕಳೆದ 3 ದಿನದಿಂದ ಗಂಗಾವತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. 733 ಪೊಲೀಸರನ್ನು ಗಂಗಾವತಿ ನಗರದಾದ್ಯಂತ ಬಂದೋಬಸ್ಟ್ ಗಾಗಿ ನಿಯೋಜನೆ ಮಾಡಲಾಗಿತ್ತು.
ಇನ್ನು ಗಂಗಾವತಿ ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು ಇರಿಸಲು ಡ್ರೋಣ್ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಎರಡು ಹಬ್ಬಗಳು ಶಾಂತಿಯುತವಾಗಿ ನಡೆದವು.
ಈ ವೇಳೆ ಗಂಗಾವತಿ ನಗರವನ್ನ ಪ್ರವೇಶಿಸದಂತೆ ವಾಹನಗಳಿಗೆ ರೂಟ್ ಮ್ಯಾಪ್ ಮಾಡಲಾಗಿತ್ತು. ಇದರಿಂದ ನಗರ ಪ್ರವೇಶ ಮಾಡುವ ವಾಹನಗಳನ್ನ ತೀವ್ರ ತಪಾಸಣೆ ಮಾಡಲಾಗ್ತಿತ್ತು. ಹನುಮ ಮಾಲಾಧಾರಿಗಳ ವಾಹನದಾರರು ನಾವೇನು ಪಾಕಿಸ್ತಾನ ದಿಂದ ಬಂದಿದ್ದೇವಾ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಗಂಗಾವತಿ ಯಲ್ಲಿ ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ವಹಿಸಿದ್ದ ಬಿಗಿ ಪೊಲೀಸ್ ವ್ಯವಸ್ಥೆಯಿಂದ ಹನುಮ ಜಯಂತಿ ಶಾಂತಿಯುತವಾಗಿ ನಡೆದಿದೆ. ಎಸ್‍ಪಿ ಮುಂಜಾಗ್ರತಾ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಮೆರವಣಿಗೆಗೆ ಅವಕಾಶ ಕೊಡಬೇಕಿತ್ತು ಎಂದು ಅಪಸ್ವರ ಎತ್ತಿದ್ದಾರೆ. ಗಂಗಾವತಿಯಲ್ಲಿ ಈ ಬಾರಿ ಈದ್ ಮಿಲಾದ್ ಹಾಗೂ ಹನುಮಮಾಲಾ ಜಯಂತಿ ಶಾಂತಿಯುವಾಗಿ ನಡೆದಿರೋದು ಮಾತ್ರ ಎಲ್ಲರಲ್ಲಿ ಹರ್ಷ ತಂದಿದೆ.