– ಜನವರಿ 12, 13ರಂದು ಹಂಪಿ ಉತ್ಸವ ಆಚರಣೆಗೆ ಮುಂದಾದ ಸರ್ಕಾರ
ಬೆಳಗಾವಿ: ಬಳ್ಳಾರಿ ಜನರ ಪ್ರತಿಭಟನೆ, ಪ್ರತಿಪಕ್ಷಗಳ ಟೀಕೆಯಿಂದ ಎಚ್ಚೆತ್ತ ಸರ್ಕಾರ 8 ಕೋಟಿ ರೂ. ವೆಚ್ಚದಲ್ಲಿ ಹಂಪಿ ಉತ್ಸವ ಆಚರಿಸುವ ನಿರ್ಧಾರ ಕೈಗೊಂಡಿದೆ.
ಪರಿಷತ್‍ನಲ್ಲಿ ಇಂದು ನಡೆದ ಕಲಾಪದಲ್ಲಿ ಹಂಪಿ ಉತ್ಸವದ ಕುರಿತು ಕೆ.ಸಿ.ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಜನವರಿ 12 ಹಾಗೂ 13ರಂದು ಹಂಪಿ ಉತ್ಸವ ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು 60 ಲಕ್ಷ ರೂ. ಬಿಡುಗಡೆ ಮಾಡಿದೆ. ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಹಂಪಿ ಉತ್ಸವ ನಡೆಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
Advertisement
Advertisement
ರಾಜ್ಯದ ನೂರು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಾರಿಯ ಹಂಪಿ ಉತ್ಸವವನ್ನು ಕೈಬಿಡಲಾಗುತ್ತಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು, ಬಳ್ಳಾರಿಯ ಜನತೆ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
Advertisement
ಫೇಸ್‍ಬುಕ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಜನಾರ್ದನ ರೆಡ್ಡಿ, ಕೋಟಿ ಕೋಟಿ ಹಣ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ಮಾಡ್ತೀರಿ. ಉಪ ಚುನಾವಣೆ ಗೆಲ್ಲೋದಕ್ಕೆ ನೀರಿನಂತೆ ಹಣ ಖರ್ಚು ಮಾಡ್ತೀರಿ. ಅವೆಲ್ಲದಕ್ಕೂ ಇರದ ಬರ, ಹಂಪಿ ಉತ್ಸವದ ವಿಚಾರಕ್ಕೆ ಏಕೆ ಬರುತ್ತೆ. ಅಲ್ಲದೇ ಹಂಪಿ ಉತ್ಸವ ಮಾಡಲು ನಿಮ್ಮ ಕೈಲಿ ಆಗಲಿಲ್ಲ ಅಂದ್ರೆ ಹೇಳಿ. ನಾನು ದುಡ್ಡು ಕೊಡ್ತೇನೆ. ಹಂಪಿ ಉತ್ಸವ ನಡೆಸಿ ಅಂತ ದೋಸ್ತಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದರು.
Advertisement
ಹಂಪಿ ಉತ್ಸವದ ಕುರಿತು ಪ್ರತಿಕ್ರಿಯೆ ನೀಡಿದ್ದ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅವರು, ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವೂ ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ. ಸರ್ಕಾರ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆಯ ಪರಂಪರೆಯಾಗಿದೆ. ಹಂಪಿ ಉತ್ಸವಕ್ಕೆ ಒಂದು ಇತಿಹಾಸವಿದೆ ಅದನ್ನು ಎಲ್ಲರು ಗೌರವಿಸಬೇಕು ಎಂದು ಸರ್ಕಾರ ವಿರುದ್ಧ ಗುಡುಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv