ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ಉತ್ಸವ ದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡಾಗ್ ಶೋ ಎಲ್ಲರ ಕಣ್ಮನ ಸೆಳೆಯಿತು.
ಉತ್ಸವದ ಭಾಗವಾಗಿ ಹೊಸಪೇಟೆ ನಗರದ ಮುನ್ಸಿಪಲ್ ಮೈದಾನದಲ್ಲಿ ಡಾಗ್ ಶೋ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಸುಮಾರು 27 ವಿವಿಧ ತಳಿಯ 200ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ಬೆರಗುಗೊಳಿಸಿದವು.
ಪ್ರದರ್ಶನದಲ್ಲಿ ಪ್ರಮುಖವಾಗಿ ಬರ್ನಾಡ್, ಬಾಕ್ ಸ್ಟೇಬೇರಿಯನ್, ಮುಧೋಳ್, ಡಾಲ್ಮೇಶಿಯನ್, ಅಕಿತಾ, ಪಾಕಿಸ್ತಾನ ಬುಲ್ಲಿ, ಪಮೆರೇಯಿನ್ ಸೇರಿದಂತೆ ದೇಶ ವಿದೇಶಗಳ ತಳಿಗಳು ಭಾಗವಹಿಸಿದ್ದವು. ಅದರಲ್ಲೂ ಪೊಲೀಸ್ ಇಲಾಖೆಯ ಶ್ವಾನಗಳು ತಮ್ಮ ಕಮಾಂಡರ್ ಹೇಳಿದಂತೆ ಲೆಫ್ಟ್, ರೈಟ್ ಹಾಗೂ ಸೂಟ್‍ಕೇಸ್‍ನಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದವು.
ಡಾಗ್ ಶೋವನ್ನು ನೋಡಲು ಮೈದಾನ ತುಂಬ ಕಿಕ್ಕಿರಿದು ತುಂಬಿದ ಜನರನ್ನು ನೋಡಿದ ಕೆಲವು ಶ್ವಾನಗಳು ಗಾಬರಿಗೊಂಡವು. ನಂತರ ಶ್ವಾನ ಪೋಷಕರು ಅವುಗಳ ಮೈದಡವಿ ಪ್ರೀತಿಯನ್ನು ತೊರಿಸುತಿದ್ದಿದ್ದು ಸಾಮಾನ್ಯವಾಗಿತ್ತು.