18 ವರ್ಷ ಕಳೆದರೂ ಸಿತಾರಾ ವಿಮಾನ ಪೂರೈಸದ ಎಚ್‍ಎಎಲ್

Public TV
1 Min Read
HAL Sitara 1

ನವದೆಹಲಿ: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಕಳೆದ 18 ವರ್ಷಗಳಿಂದ ಒಂದೇ ಒಂದು ಸಿತಾರಾ ವಿಮಾನವನ್ನು ಪೂರೈಕೆ ಮಾಡದ ಕಾರಣ ಭಾರತೀಯ ವಾಯುಪಡೆಯಲ್ಲಿ ತರಬೇತಿ ವಿಮಾನಗಳ ಕೊರತೆ ಎದುರಾಗಿದೆ.

ರಕ್ಷಣಾ ಸಚಿವಾಲಯವು ವಿಮಾನಗಳನ್ನು ಪೂರೈಸುವಂತೆ ಎಚ್‍ಎಎಲ್ ಜೊತೆಗೆ 1999ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದ ಮಾಡಿಕೊಂಡು 18 ವರ್ಷಗಳಾದರೂ ಒಂದೇ ಒಂದು ವಿಮಾನವನ್ನು ಎಚ್‍ಎಎಲ್ ಪೂರೈಸಿಲ್ಲ. ಈ ವಿಚಾರ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಒಪ್ಪಂದವನ್ನು ರದ್ದುಗೊಳಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

HAL HJT 36 Sitara at HAL

ಒಪ್ಪಂದಲ್ಲಿ ಏನಿತ್ತು?:
ರಕ್ಷಣಾ ಸಚಿವಾಲಯದ 1999ರ ಒಪ್ಪಂದದ ಪ್ರಕಾರ ‘ಸಿತಾರ ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್’ ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಎಚ್‍ಎಎಲ್ ಮಾಡಬೇಕಿತ್ತು. ಜೊತೆಗೆ 2005ರಲ್ಲಿ 12 ವಿಮಾನಗಳನ್ನು ಹಾಗೂ 2010ರಲ್ಲಿ 73 ವಿಮಾನಗಳನ್ನು ವಾಯುಪಡೆಗೆ ನೀಡಬೇಕಿತ್ತು. ಆದರೆ ಎಚ್‍ಎಎಲ್, ಸಿತಾರ ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್ ವಿಮಾನಗಳ ವಿನ್ಯಾಸವನ್ನೇ ಪೂರ್ಣಗೊಳಿಸಿಲ್ಲ ಎಂದು ರಕ್ಷಣಾ ಸಚಿವಾಲಯವು ಸಂಸದೀಯ ಸಮಿತಿಗೆ ಮಾಹಿತಿ ನೀಡಿದೆ.

ಎಚ್‍ಎಎಲ್ ವಿನ್ಯಾಸಗೊಳಿಸಿದ್ದ ವಿಮಾನದಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದವು. ತರಬೇತಿ ಪಡೆಯುವ ಪೈಲಟ್‍ಗಳು ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಅದರಲ್ಲಿ ಕಾಣಿಸಿಕೊಂಡ ಸಮಸ್ಯೆಗಳನ್ನು ಸರಿಪಡಿಸುವಂತೆ ತಜ್ಞರ ತಂಡವು ಎಚ್‍ಎಲ್‍ಗೆ ಸಲಹೆ ನೀಡಿತ್ತು. ಆದರೂ ವಿಮಾನದ ನ್ಯೂನತೆಗಳನ್ನು ಸರಿಪಡಿಸಲು ಎಚ್‍ಎಎಲ್ ವಿಫಲವಾಗಿದೆ ಎಂದು ವರದಿ ತಿಳಿಸಿದೆ.

HAL Sitara 2

ವಿಮಾನ ತಯಾರಿಕಾ ಖಾಸಗಿ ಸಂಸ್ಥೆಯೊಂದರ ಸಹಾಯ ಪಡೆದರೂ ಕೂಡ ಸಿತಾರಾ ವಿಮಾನಗಳ ದೋಷ ಸರಿಪಡಿಸುವಲ್ಲಿ ಎಚ್‍ಎಎಲ್ ವಿಫಲವಾಗಿದೆ. ಇದರಿಂದಾಗಿ ಒಪ್ಪಂದವನ್ನು ರದ್ದುಗೊಳಿಸುವ ಚಿಂತನೆಯನ್ನು ರಕ್ಷಣಾ ಸಚಿವಾಲಯ ನಡೆಸಿದೆ. ಇತ್ತ ವಾಯುಪಡೆಗೆ ಅಗತ್ಯವಿರುವ ತರಬೇತಿ ವಿಮಾನಗಳನ್ನು ವಿದೇಶಿ ಕಂಪನೆಗಳಿಂದ ತರೆಸಿಕೊಳ್ಳುವ ವಿಚಾರವಾಗಿಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *