ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ರವಿ ಬೆಳಗೆರೆ ಬಂಧನವಾಗಿದೆ. ಆದರೆ ರವಿ ಬೆಳಗೆರೆ ಬಂಧನಕ್ಕೆ ಏನೆಲ್ಲ ಕಸರತ್ತು ನಡೆದಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಹೌದು, ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
Advertisement
ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು.
Advertisement
ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಗೌರಿ ಹತ್ಯೆಯ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಗೌರಿ ಹತ್ಯೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಆದರೆ ಪತ್ರಕರ್ತ ರವಿ ಬೆಳಗೆರೆ ಬಗ್ಗೆ ನನಗೆ ಗೊತ್ತಿದೆ ಎಂದಿದ್ದಾನೆ. ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಗಳನ್ನು ಕೆದಕಿದಾಗ ಆತ ನಾನು ಪಿಸ್ತೂಲ್ ಮಾರಾಟ ಮಾಡುತ್ತಿದ್ದು, ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿಗೆ ನಾಡ ಪಿಸ್ತೂಲ್ ಮತ್ತು 02 ಜೀವಂತ ಗುಂಡುಗಳನ್ನು ನೀಡಿದ್ದೆ ಎಂದು ತಿಳಿಸಿದ್ದಾನೆ.
Advertisement
ಈ ಮಾಹಿತಿ ಆಧಾರದಲ್ಲಿ ಶಶಿಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇವರಿಬ್ಬರು ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ನೀಡಿದ್ದಾರೆ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ. 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು. ಆದರೆ ಸುನೀಲ್ ಮನೆಯಲ್ಲಿ ಇಲ್ಲದ ಕಾರಣ ಹತ್ಯೆ ನಡೆಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೇ ಸುನೀಲ್ ಮನೆ ಮುಂದೆ ಸಿಸಿಟಿವಿ ಇದೆ ಎಂದು ಬೆಳಗೆರೆಗೆ ತಿಳಿಸಿದ್ದೆವು. ಈ ವಿಚಾರ ತಿಳಿದು ರವಿ ಬೆಳಗೆರೆ ಕೆಂಡಾಮಂಡಲಗೊಂಡು ಇನ್ನು ಒಂದು ತಿಂಗಳು ಈ ಕಡೆ ಬರುವುದೇ ಬೇಡ, ಒಂದು ತಿಂಗಳ ಕಾಲ ಡಿವಿಆರ್ ನಲ್ಲಿ ಡೇಟಾ ಸೇವ್ ಆಗಿರುತ್ತದೆ. ಹೀಗಾಗಿ ಈ ಕಡೆ ತಲೆಹಾಕಬೇಡಿ. ಒಂದು ತಿಂಗಳು ಬಿಟ್ಟು ಆತನನ್ನು ಮುಗಿಸಿ ಎಂದಿದ್ದರು ಎಂದು ಇವರಿಬ್ಬರು ತಿಳಿಸಿದ್ದಾರೆ.
Advertisement
ರವಿ ಬೆಳಗೆರೆ ಸಾರಥ್ಯದಲ್ಲಿ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ತಿಳಿಯುತ್ತಿದ್ದಂತೆ ಖಾಕಿಗಳು ಒಮ್ಮೆ ಶಾಕ್ ಆಗಿದ್ದಾರೆ. ಪ್ರಭಾವಿ ಪತ್ರಕರ್ತನಾಗಿರುವ ಬೆಳಗೆರೆಯನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗಿ ಡಿಜಿಪಿ ನೀಲಮಣಿ ರಾಜು ಅವರನ್ನು ಭೇಟಿ ಮಾಡಿ ಸ್ಫೋಟಕ ಸುದ್ದಿಯನ್ನು ತನಿಖಾ ಅಧಿಕಾರಿಗಳು ನೀಡಿದ್ದಾರೆ. ಬೆಳಗೆರೆ ಹೆಸರನ್ನು ಕೇಳಿ ನೀಲಮಣಿ ರಾಜು ಅವರು ಕ್ಷಣ ಬೆಚ್ಚಿ ಬಿದ್ದು ಬಂಧನ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ಮಾಹಿತಿಯನ್ನು ರವಾನಿಸುತ್ತಾರೆ. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ
ಕೆಂಪಯ್ಯ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿಳಿಸಲು ಮುಂದಾಗುತ್ತಾರೆ. ಈ ವೇಳೆ ಸಿಎಂ ತಮ್ಮನ ಮಗನ ಮದುವೆಗಾಗಿ ಮೈಸೂರಿಗೆ ತೆರಳಿದ್ದರು. ಪ್ರಕರಣ ಗಂಭೀರವಾಗಿರುವ ಇರುವ ಕಾರಣ ಕೆಂಪಯ್ಯ ಈ ವಿಚಾರವನ್ನು ಫೋನಿನಲ್ಲಿ ಹೇಳಲು ಇಚ್ಚಿಸದೇ ನೇರವಾಗಿ ಸಿಎಂ ಭೇಟಿಯಾಗಲು ನವೆಂಬರ್ 28 ರಂದು ಮೈಸೂರಿಗೆ ತೆರಳುತ್ತಾರೆ.
ಕೆಂಪಯ್ಯ ಮೈಸೂರಿಗೆ ಭೇಟಿ ನೀಡಿದಾಗ ಸಹೋದರನ ಮದುವೆಯಲ್ಲಿ ಊಟ ಮಾಡುತ್ತಾ ಸಿಎಂ ಕುಳಿದ್ದರು. ಊಟದ ಬಳಿಕ ಕೆಂಪಯ್ಯ ಬೆಳಗೆರೆ ಸುಪಾರಿ ನೀಡಿರುವ ವಿಚಾರವನ್ನು ತಿಳಿಸುತ್ತಾರೆ. “ಹೌದಾ. ಇದು ನಿಜವೇ ಏನು ಹೇಳುತ್ತಿದ್ದೀರಿ?” ಎಂದು ಸಿಎಂ ಕೆಂಪಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮುಂದೆ ಏನು ಮಾಡುವುದು ಎಂದು ಕೆಂಪಯ್ಯ ಸಿಎಂ ಅವರಲ್ಲಿ ಕೇಳಿದ್ದಾರೆ. ಕೆಲ ನಿಮಿಷ ಯೋಚಿಸಿ ಸಿಎಂ, ಮುಂದೆ ಹೋಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನಂತರ ಬಂಧಿಸಿ ಎಂದು ಸೂಚನೆ ಕೊಟ್ಟಿದ್ದಾರೆ.
ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಚುರುಕೊಂಡ ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಗುರುವಾರ ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಬಂಧಿಸಿ ಶುಕ್ರವಾರ ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ
ಒಟ್ಟಿನಲ್ಲಿ ಗೌರಿ ಹತ್ಯೆಯ ತನಿಖೆಯ ವೇಳೆ ಮತ್ತೊಂದು ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ರವಿ ಬೆಳಗೆರೆ ಕ್ರೈಂ ಪತ್ರಕರ್ತರಾಗಿರುವ ಕಾರಣ ಅವರಿಗೆ ಮತ್ತಷ್ಟು ಸುಪಾರಿ ಕಿಲ್ಲರ್ಸ್ ಗಳ ಬಗ್ಗೆ ಮಾಹಿತಿ ಇರಬಹುದು ಎನ್ನುವ ಅನುಮಾನ ಈಗ ಪೊಲೀಸರದ್ದು. ಹೀಗಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.