ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಆಣೆ ಪ್ರಮಾಣದ ಪ್ರಸಂಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಾರಾ ಮಹೇಶ್ ಸವಾಲು ಸ್ವೀಕರಿಸಿದ ವಿಶ್ವನಾಥ್ ಗುರುವಾರ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡಲು ಒಪ್ಪಿಕೊಂಡಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಸಾರಾ ಮಹೇಶ್ ಸುದ್ದಿಗೋಷ್ಠಿ ನಡೆಸಿ, ನಾಳೆ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ವಿಶ್ವನಾಥ್ ಅವರು ಚಾಮುಂಡಿ ದೇವಿ ಮುಂದೆ ನಿಂತು ನಾನು ಯಾವುದೇ ಆಸೆ ಅಮಿಷಕ್ಕೆ ಒಳಗಾಗಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಅನರ್ಹ ಶಾಸಕ ಎಚ್.ವಿಶ್ವನಾಥ್ ನಾಳೆ ಬೆಳಗ್ಗೆ 9ಕ್ಕೆ ಚಾಮುಂಡಿ ಬೆಟ್ಟಕ್ಕೆ ಮಾಗಮಿಸಿ ಈ ಕುರಿತು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
ವಿಶ್ವನಾಥ್ ಅವರು ಚಾಮುಂಡಿ ದೇವಿ ಮುಂದೆ ನಿಂತು ನಾನು ಯಾವುದೇ ಆಸೆ ಅಮಿಷಕ್ಕೆ ಒಳಗಾಗಿಲ್ಲ ಎಂದು ಪ್ರಮಾಣ ಮಾಡಿದರೆ ಅಲ್ಲೇ ನಾನು ನಾಡಿನ ಜನರ ಮುಂದೆ ಬೇಷರತ್ ಕ್ಷಮೆ ಕೇಳುತ್ತೇನೆ. ಹುಣಸೂರಿಗೆ ಹೊಸ ಡಿವೈಎಸ್ಪಿ ಹಾಕಿಸಿಕೊಂಡಿದ್ದೀರಿ, ಅದಕ್ಕೆ ಎಷ್ಟು ಹಣ ಪಡೆದಿದ್ದೀರಿ. ಕುಮಾರಣ್ಣನ ಮುಂದೆ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ, ಎಲ್ಲವನ್ನೂ ನಾನು ಚಾಮುಂಡಿ ಸನ್ನಿಧಿಯಲ್ಲೇ ಹೇಳುತ್ತೇನೆ ಎಂದರು.
Advertisement
Advertisement
ಚಾಮುಂಡಿ ಮುಂದೆ ಪ್ರಮಾಣ ಮಾಡಲು ವಿಶ್ವನಾಥ್ ಬರಲಿ. ಅವರೊಂದಿಗೆ ಪತ್ರಕರ್ತ ಮರಂಕಲ್ ಅವರನ್ನೂ ಕರೆತರಲಿ, ಅವರಿಗೆ ಸತ್ಯ ಗೊತ್ತಿದೆ. ಶರಣಗೌಡ ಪಾಟೀಲ್ ವಿಚಾರದಲ್ಲೂ ಅವರ ಮರಂಕಲ್ ಪಾತ್ರ ಇತ್ತು. ಇದರಲ್ಲೂ ಅವರ ಪಾತ್ರ ಇದೆ. ಹೀಗಾಗಿ ನಾಳೆ ಬೆಟ್ಟಕ್ಕೆ ಮರಂಕಲ್ ಅವರನ್ನು ಕರೆದುಕೊಂಡು ಬರಲಿ, ಅವರಿಗೆ ಸತ್ಯ ಗೊತ್ತಿದೆ. ಮರಂಕಲ್ ಮುಂದೆಯೇ ವಿಶ್ವನಾಥ್ ಚಾಮುಂಡಿ ತಾಯಿ ಬಳಿ ಪ್ರಮಾಣ ಮಾಡಲಿ. ಚಾಮುಂಡಿ ಪಾದ ಬೇಡ ಗೋಪುರದ ಬಳಿಯೇ ಪ್ರಮಾಣ ಮಾಡಲಿ ಸಾಕು ಎಂದು ಸವಾಲು ಹಾಕಿದ್ದಾರೆ.
Advertisement
ಎಚ್.ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಅತೀವ ಬೇಸರವಾಗಿತ್ತು. ಹೀಗಾಗಿ ಸೆಪ್ಟೆಂಬರ್ 18ರಂದು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದೆ. ಆಗ ಸ್ಪೀಕರ್ ಹೊರ ದೇಶದಲ್ಲಿದ್ದರು. ಸ್ಪೀಕರ್ ಹೊರ ದೇಶದಿಂದ ಬಂದ ನಂತರ ನನ್ನನ್ನು ಕರೆಸಿ ಸ್ಪೀಕರ್ ಮನವೊಲಿಸಿದ್ದರು. ಹೀಗಾಗಿ ರಾಜೀನಾಮೆ ನೀಡಲಿಲ್ಲ, ಇನ್ನೂ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೇ ಇದೆ ಎಂದು ಇದೇ ವೇಳೆ ತಿಳಿಸಿದರು.
ಎಚ್.ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ಸೋನಿಯಾಗಾಂಧಿಗೆ ಪತ್ರ ಬರೆದಿದ್ದರು. ಎಸ್.ಎಂ. ಕೃಷ್ಣ ವಿರುದ್ಧ ಪುಸ್ತಕ ಬರೆದಿದ್ದರು. ಕೊನೆಗೆ ಮಾಜಿ ಪ್ರಧಾನಿ ದೇವೇಗೌಡ ಮುಂದೆ ಕೈ ಮುಗಿದು ನನ್ನನ್ನು ಒಂದು ಬಾರಿ ಶಾಸಕರಾಗಿ ಮಾಡಿ ಎಂದು ಕೇಳಿದ್ದರು. ಇಂದು ದೇವರಾಜ ಅರಸು ಹೆಸರು ಹೇಳುತ್ತಾರೆ. ಆದರೆ ದೇವರಾಜ ಅರಸು ಮಗಳ ರಾಜಕೀಯವನ್ನು ಹೇಗೆ ವಿಶ್ವನಾಥ್ ಮುಗಿಸಿದರು ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ವಿಶ್ವನಾಥ್ ನಂಬಿಕೆಗೆ ಅರ್ಹ ಅಲ್ಲ, ಅವರನ್ನು ನಂಬ ಬೇಡ, ಅವರು ಒಳ್ಳೆಯವರಲ್ಲ ಎಂದು ಜಿಟಿಡಿ ನನಗೆ ಅವತ್ತೇ ಹೇಳಿದ್ದರು. ಆದರೆ ನಾನು ಜಿಟಿಡಿ ಮಾತು ಕೇಳಲಿಲ್ಲ ಎಂದರು.
ಹುಣಸೂರಲ್ಲಿ ಎಚ್.ವಿಶ್ವನಾಥ್ ಆಗಲಿ ಅವರ ಕುಟುಂಬದರಾಗಲಿ ಚುನಾವಣೆಗೆ ನಿಲ್ಲುವುದಿಲ್ಲ. ಅಲ್ಲಿನ ಟಿಕೆಟ್ ಬೇರೆಯವರಿಗೆ ನಿರ್ಧಾರವಾಗಿದೆ. ಆದರೆ ನ್ಯಾಯಾಲಯದ ಆದೇಶ ಬಂದ ಮೇಲೆ ಅವರು ಈ ಜಿಲ್ಲೆ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಟಾಂಗ್ ನೀಡಿದರು.
ಹುಣಸೂರಿನಲ್ಲಿ ಈ ಜಿಲ್ಲೆಯವರಂತೂ ಸ್ಪರ್ಧಿಸಲ್ಲ. ಹೊರ ಜಿಲ್ಲೆಯವರು ಬಂದು ಸ್ಪರ್ಧೆ ಮಾಡುತ್ತಾರೆ. ಅದಕ್ಕೆ ಬೇರೆ ರೀತಿಯ ಒಪ್ಪಂದ ಆಗಿದೆ. ಆ ಒಪ್ಪಂದ ಏನು ಎನ್ನುವುದನ್ನು ಹೇಳೋಕೆ ಅವರು ಮತ್ತೆ ದೇವರ ಮುಂದೆ ಬರಬೇಕು. ಅವೆಲ್ಲವನ್ನು ಆಮೇಲೆ ಮಾತಾಡೋಣ ಎಂದು ಯಾರು ಸ್ಪರ್ಧಿಸುತ್ತಾರೆ ಎಂಬುದನ್ನು ಹೇಳಲು ನಿರಾಕರಿಸಿದರು.
ವಿಶ್ವನಾಥ್ ಹೇಳಿದ್ದೇನು?
ಮೈಸೂರು ಜಿಲ್ಲೆ ವಿಭಜನೆಗೆ ಪಟ್ಟು ಹಿಡಿದು ಕುಳಿತಿರುವ ಅನರ್ಹ ಶಾಸಕ ಹೆಚ್ ವಿಶ್ವನಾಥ್, ವಿಭಜನೆ ವಿರೋಧಿಸಿದವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ನನ್ನೊಬ್ಬನ ಆಶಯ ಅಲ್ಲ. ಕಿ.ಮೀ. ಲೆಕ್ಕವೂ ಅಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದರು. ಕಿ.ಮೀ. ಬಗ್ಗೆ ಮಾತಾಡುವ ಸಿದ್ದರಾಮಯ್ಯ ಅಧ್ಯಯನ ಮಾಡೋದು ಒಳಿತು. ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆ ಆಗಿಲ್ಲವೇ ಎಂದು ಪ್ರಶ್ನಿಸಿದ್ದರು.
ಜಿಲ್ಲೆ ಒಡೆಯುವುದು ಚುನಾವಣೆ ಗಿಮಿಕ್ ಎಂದ ಸಾರಾ ಮಹೇಶ್ ಅವರಿಗೂ ವಿಶ್ವನಾಥ್ ತಿರುಗೇಟು ನೀಡಿದ್ದರು. ನನ್ನನ್ನು 25 ಕೋಟಿ ರೂ.ಗೆ ಮಾರಿಕೊಂಡವನು ಎಂದು ಸಾ.ರಾ ಮಹೇಶ್ ಹೇಳಿದಾಗಲೆಲ್ಲಾ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ನನ್ನನ್ನು ಯಾರು ಕೊಂಡುಕೊಂಡಿದ್ದಾರೆ ಎಂದು ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಬಂದು ಹೇಳಲಿ. ನಾನು ಕೂಡ ಅಲ್ಲಿಗೆ ಹೋಗುತ್ತೇನೆ ಎಂದು ಸಾರಾ ಮಹೇಶ್‍ಗೆ ಸವಾಲ್ ಹಾಕಿದ್ದರು.