– ಮೈಸೂರು ನೀಡದೇ ದೇವೇಗೌಡರಿಗೆ ಅನ್ಯಾಯ
– ಎಚ್‍ಡಿಡಿ ಸೋಲು ನಾಡಿನ ಸೋಲು
– ಹೆಸರಿಗೆ ಮಾತ್ರ ಸಮನ್ವಯ ಸಮಿತಿ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಎಚ್.ವಿಶ್ವನಾಥ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಇಂದು ನಾನು ನೈತಿಕ ಹೊಣೆಗಾರಿಕೆ ಹೊತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೂ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ಕ್ಕೆ ಬಂದ ಮಾರನೇ ದಿನವೇ ನಾನು ರಾಜೀನಾಮೆ ನೀಡುವುದಾಗಿ ನಮ್ಮ ವರಿಷ್ಠರಾದ ದೇವೇಗೌಡರ ಬಳಿ ಹೇಳಿದ್ದೆ. ಆಗ ಅವರು ನನ್ನ ರಾಜೀನಾಮೆಯನ್ನ ಸ್ವೀಕರಿಸಿರಲಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡುವುದು ತಡವಾಯ್ತು ಎಂದು ಹೇಳಿದರು. ಇದನ್ನೂ ಓದಿ:ಸುದ್ದಿಗೋಷ್ಠಿಗೂ ಮುನ್ನ ದೇವೇಗೌಡ್ರಿಗೆ ವಿಶ್ವನಾಥ್ ಪತ್ರ!
Advertisement
Advertisement
ಸಾಮಾನ್ಯವಾಗಿ ಜನತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳಲ್ಲಿ ಪಕ್ಷ ಸೋತರೆ ನೈತಿಕ ಹೊಣೆಗಾರಿಕೆ ಹೊತ್ತುಕೊಂಡು ರಾಜೀನಾಮೆ ನೀಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ನಾನು ಬಹಿರಂಗವಾಗಿ ರಾಜೀನಾಮೆ ನೀಡಬೇಕು ಎಂದು ಮಾಧ್ಯಮಗಳ ಮುಂದೆ ಬಂದಿದ್ದು, ಈ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
Advertisement
Advertisement
ರಾಜೀನಾಮೆ ನೀಡಲು ಕಾರಣವೇನು ಎಂಬ ಕುರಿತು ದೇವೇಗೌಡರಿಗೆ 4 ಪುಟಗಳ ಪತ್ರವನ್ನು ವಿಶ್ವನಾಥ್ ಅವರು ಬರೆದಿದ್ದಾರೆ. ಜೊತೆಗೆ ಪಕ್ಷದ ಬಗ್ಗೆ ಕೂಡ ಮತ್ತೊಂದು ಪತ್ರವನ್ನು ಬರೆದು, ಪಕ್ಷದ ಕಾರ್ಯವೈಖರಿ ಹಾಗೂ ನಮಗಿರುವ ಅಸಮಾಧಾನದ ಬಗ್ಗೆ ವಿವರಿಸಿದ್ದಾರೆ. ಆ ಪತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಓದಿ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೆ ಸುದ್ದಿಗೋಷ್ಠಿ ಬಳಿಕ ಈ ರಾಜೀನಾಮೆ ಪತ್ರವನ್ನು ದೇವೇಗೌಡರಿಗೆ ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ದೇವೇಗೌಡರಿಗೆ ಮೈಸೂರಿನಲ್ಲಿ ಸ್ಥಾನ ನೀಡದೇ ತುಮಕೂರಿನಲ್ಲಿ ಸ್ಥಾನ ಕೊಟ್ಟರು. ಇದು ಕಾಂಗ್ರೆಸ್ ಜೆಡಿಎಸ್‍ಗೆ ಮಾಡಿದ ಅನ್ಯಾಯ. ಹೀಗಾಗಿ ತುಮಕೂರಿನಲ್ಲಿ ಸ್ಪರ್ಧೆ ಮಾಡಿ ನಮಗೆ ಸೋಲಾಯ್ತು. ದೇವೇಗೌಡರನ್ನು ಖೆಡ್ಡಾಗೆ ತಳ್ಳಿ ಸೋಲಿಸಿದರು. ದೇವೇಗೌಡರ ಸೋಲು ನಾಡಿನ ಸೋಲು. ಮಂಡ್ಯ ಸೋಲು ಕೂಡಾ ಕಾಂಗ್ರೆಸ್, ಜೆಡಿಎಸ್ ನಾಯಕರ ಕೊಂಕು ನುಡಿಗಳಿಂದ ಆಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸಮನ್ವಯ ಸಮಿತಿ ಕೇವಲ ಹೆಸರಿಗೆ ಮಾತ್ರ ಸಮಿತಿ ಆಗಿದೆ ಅಷ್ಟೇ. ಸಮನ್ವಯ ಸಮಿತಿ ಸಮನ್ವಯ ಸಾಧಿಸಲು ವಿಫಲವಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕೂಡ ಜಾರಿ ಆಗಿಲ್ಲ. ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆ ಅಷ್ಟೇ. ಹುಣಸೂರು ಕ್ಷೇತ್ರದ ಜನರ ಸೇವೆ ಮಾಡಲು ನಿರ್ಧಾರ ಮಾಡಿದ್ದೇನೆ. ಹೀಗಾಗಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.