ಮೈಸೂರು: ಮುರುಘಾ ಶ್ರೀಗಳು ಯಾವುದೇ ಸಾಕ್ಷ್ಯವನ್ನು ಉಳಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮುರುಘಾ ಶ್ರೀಗಳಿಂದ ಧರ್ಮ ಪೀಠಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಪೊಲೀಸರು ಇಡೀ ಕೇಸ್ ಅನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ ನ್ಯಾಯಾಲಯ ಪೊಲೀಸರಿಗೆ ಚಳಿ ಬಿಡಿಸಿದ ಮೇಲೆ ಉಳಿದ ಆರೋಪಿಗಳನ್ನು ಈಗ ಹುಡುಕುತ್ತಿದ್ದಾರೆ. ಸರ್ಕಾರವು ಪ್ರಕರಣವನ್ನು ಲಘುವಾಗಿ ಪರಿಗಣಿಸಿತು. ಆರೋಪಿಗಳನ್ನು ಮಠದ ಒಳಗೆ ಓಡಾಡಲು ಬಿಟ್ಟು ಸಾಕ್ಷ್ಯ ನಾಶಕ್ಕೆ ಅವಕಾಶ ಮಾಡಿಕೊಡಲಾಯಿತು. ಸ್ವಾಮೀಜಿಗಳು ಮಲಗುವ ಬೆಡ್, ಬೆಡ್ ಶೀಟ್‍ಗಳು ಎಲ್ಲವೂ ಬದಲಾಗಿ ಸಾಕ್ಷ್ಯ ನಾಶ ಮಾಡಲಾಗಿದೆ. ಈ ಪ್ರಕರಣದಲ್ಲಿ ಸತ್ಯನಾಶವಾಗಿದೆ ಎಂದು ಕಿಡಿಕಾರಿದರು.
ಒಡನಾಡಿ ಸಂಸ್ಥೆಯ ಧೈರ್ಯ ಮೆಚ್ಚಬೇಕು ಎಂದ ಅವರು, ಇಡೀ ವ್ಯವಸ್ಥೆ ಹಾಳು ಮಾಡಿದ ಚಿತ್ರದುರ್ಗದ ಎಸ್ಪಿಯನ್ನು ಅಮಾನತ್ತು ಮಾಡಿ ಎಂದು ಒತ್ತಾಯಿಸಿದರು. ಪ್ರಕರಣದ ಆರೋಪಿಗಳು ಮಠದಲ್ಲೇ ಇದ್ದಾರೆ. ಕೆಲವು ಮಂತ್ರಿಗಳು, ಮಾಜಿ ಮಂತ್ರಿಗಳು ಸ್ವಾಮೀಜಿ ಪರವಾಗಿ ಮಾತನಾಡುತ್ತಾರೆ. ಲೈಂಗಿಕ ದೌರ್ಜನ್ಯ ಮಾಡಿದ ಸ್ವಾಮೀಜಿ ಪರವಾಗಿ ಮಾತನಾಡುವುದನ್ನು ನಿಲ್ಲಿಸಿ. ಸ್ವಾಮೀಜಿಯಿಂದ ನಾಡಿಗೆ ಕಳಂಕ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ
ಇದೇ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅವರು, ಸ್ವಾಮೀಜಿ ಅವರು ಇಡೀ ಮಠದ ಪರಂಪರೆಗೆ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬ್ರಹ್ಮಾಚಾರಿ ಅಂತಾ ಹೇಳಿಕೊಂಡು ಈ ರೀತಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗುತ್ತಾರೆ. ನಮ್ಮಲ್ಲಿ ಬಹಳಷ್ಟು ಮಠಾಧಿಪತಿಗಳಿದ್ದಾರೆ. ಆದರೆ ಎಲ್ಲರೂ ಬ್ರಹ್ಮಚಾರಿಗಳಾಗಿ ಉಳಿದಿಲ್ಲ. ಬ್ರಹ್ಮಚಾರಿಗಳು ಅಂತಾ ಹೇಳಿ ಮಠದಲ್ಲಿ ಕುಳಿತು ಸರ್ಕಾರದ ಕೋಟ್ಯಂತರ ರೂ. ಅನುದಾನ ಪಡೆದು ಮಜಾ ಮಾಡುತ್ತಾರೆ. ಇದಕ್ಕೆ ಲೆಕ್ಕ ಕೇಳುವವರು ಯಾರು? ಶ್ರೀಗಳ ವಿರುದ್ಧ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಮಾಡಿ ಕೊಟ್ಟಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಸಂತ್ರಸ್ತ ಮಗುವಿನ ಚಿಕ್ಕಪ್ಪನ ಹೇಳಿಕೆ ಇಲ್ಲಿ ಪ್ರಾಮುಖ್ಯತೆ ಪಡೆಯಲ್ಲ. ವಿಚಾರಣೆ ವೇಳೆ ಸ್ವಾಮೀಗಳು ಮಾತಾಡುತ್ತಿಲ್ಲ. ಬೇರೆ ಅಪರಾಧಿಗಳು ಮಾತಾಡದೇ ಇದ್ದಾಗ ಲಾಠಿ ಬೀಸುತ್ತಾರೆ. ಸ್ವಾಮೀಜಿಗೆ ಪೊಲೀಸರು ಏನೂ ಫಲಹಾರ ಬೇಕು ಕೇಳುತ್ತಿದ್ದಾರೆ. ಬ್ರಹ್ಮಚಾರಿಗಳ ವೇಷದಲ್ಲಿ ಬಹಳಷ್ಟು ಮಠಾಧೀಶರು ಇದ್ದಾರೆ. ಸಂಸಾರಿಗಳೇ ಸ್ವಾಮೀಜಿಗಳಾಗಲಿ. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳೇ ಮಾದರಿಯಾಗಲಿ. ಸ್ವಾಮಿ ಪರವಾಗಿ ಮಾತಾಡುತ್ತಿರುವ ಸ್ವಾಮಿಗಳನ್ನು ಈ ಪ್ರಕರಣದ ಒಳಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ