ಕಾಂಗ್ರೆಸ್ ಸರ್ಕಾರದ್ದು ಗೃಹಜ್ಯೋತಿಯೋ, ಸುಡುಜ್ಯೋತಿಯೋ? – ಹೆಚ್‌ಡಿಕೆ ಟೀಕೆ

Public TV
2 Min Read
hd kumaraswamy 4

ಬೆಂಗಳೂರು: ವಿದ್ಯುತ್ ಮೇಲೆ ವಿಧಿಸಿರುವ 9% ರಷ್ಟು ತೆರಿಗೆಯಲ್ಲಿ 3% ರಿಂದ 4% ರಷ್ಟು ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಅಪರಿಮಿತವಾಗಿ ಹೆಚ್ಚಳವಾಗಿರುವ ವಿದ್ಯುತ್ ದರದ ಬಗ್ಗೆ ಬಿಕ್ಕಟ್ಟಿಗೆ ಸಿಲುಕಿರುವ IT & ESDM ವಲಯಗಳ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ ಅವರ ಅಹವಾಲು ಸ್ವೀಕರಿಸಿದ ನಂತರ ಮಾಜಿ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿದರು. ಇದನ್ನೂ ಓದಿ: 13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡೋಕೆ ಆಗಲ್ಲ: ಸಿದ್ದುಗೆ ಡಿವಿಎಸ್ ಟಾಂಗ್

GRUHAJYOTHI

ದುಬಾರಿ ವಿದ್ಯುತ್ ದರದಿಂದ ಸಾರ್ವಜನಿಕರ ಜತೆಗೆ ಕೈಗಾರಿಕಾ ವಲಯವೂ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ಜನರ ತುಟಿಗೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ವಿದ್ಯುತ್ ಮೇಲಿನ ತೆರಿಗೆಯಲ್ಲಿ ಕೊಂಚ ಕಡಿತ ಮಾಡಲಿ ಎಂದರು.

ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕ ಆಡುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್ಲುಗಳನ್ನು ನೀಡುತ್ತಿರುವುದು ಗೃಹಜ್ಯೋತಿಯೇ? ಅದು ಗೃಹಜ್ಯೋತಿಯಲ್ಲ, ಸುಡುಜ್ಯೋತಿ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ; ಬೇರೆ ಆಪ್ಷನ್‌ ನೋಡ್ತಿದ್ದೇವೆ: ಡಿಕೆಶಿ

Congress Guarantee Electricity

ವಿದ್ಯುತ್ ದರ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆಟ ಆಡುತ್ತಿವೆ. ಕಾಂಗ್ರೆಸ್ ಸರ್ಕಾರ ನೋಡಿದರೆ, ನಾವು ದರ ಜಾಸ್ತಿ ಮಾಡಿಲ್ಲ. ಹಿಂದೆ ಇದ್ದ ಬಿಜೆಪಿ ಹೆಚ್ಚಳ ಮಾಡಿದ್ದು ಎಂದು ನೆಪ ಹೇಳಿ ಜವಾಬ್ದಾರಿಯಿಂದ ಜಾಣತನದಿಂದ ಪಲಾಯನ ಮಾಡುತ್ತಿದೆ. ಇವರ ನಾಟಕ ಜನರಿಗೆ ಅರ್ಥ ಆಗುತ್ತಿದೆ ಎಂದು ಸಿಡಿಮಿಡಿಯಾದರು.

ಸಿಎಂ ಮುಂದೆ ಕಷ್ಟ ಹೇಳೋಕೆ ಹೋಗಿದ್ದಾರೆ. ಇವರಿಗೆ ಸಮಯ ಕೊಡಲು ಮುಖ್ಯಮಂತ್ರಿಗಳಿಗೆ ವ್ಯವಧಾನ ಇಲ್ಲ. ಇವರು ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇಂಥವರು ಹೋದಾಗ ದೊಡ್ಡ ಸ್ಥಾನದಲ್ಲಿ ಕೂತವರು ಸಜ್ಜನಿಕೆಯಿಂದ ವರ್ತಿಸಬೇಕು ಎಂದ ಅವರು, ನಾವು ಅಧಿಕಾರದಲ್ಲಿ ಇದ್ದಾಗ ಕೆಇಆರ್‌ಸಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ದರ ಏರಿಕೆ ಮಾಡಿರಲಿಲ್ಲ ಅಂತಾರೆ ಬಿಜೆಪಿ ನಾಯಕರು. ಆದರೆ ದರ ಏರಿಕೆ ಬಗ್ಗೆ ಕೆಇಆರ್‌ಸಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಬೆಲೆ ಏರಿಕೆ ಬಗ್ಗೆ ಅರ್ಜಿ ಕೊಟ್ಟಾಗ ಕೆಇಆರ್‌ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ನೋಡಿದರೆ ಇವರು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

JDS AND CONGRESS

ರಾಜ್ಯದ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸ್ವಯಂ ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಇದು ಅರ್ಥ ಆಗುವುದಿಲ್ಲವೇ? ಆರಂಭದಲ್ಲಿಯೇ ಜನ ವಿರೋಧಿ, ಕೈಗಾರಿಕಾ ವಿರೋಧಿ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಉದ್ಯೋಗ ಸೃಷ್ಟಿ, ಹೂಡಿಕೆ ಕಥೆ ಏನು? ಇವರ ಕಷ್ಟಗಳನ್ನ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ನಿನಗೂ ಫ್ರೀ ನನಗೂ ಫ್ರೀ ಅಂತ ಹೇಳಿದಾಗ ಮುಂದಿನ ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರು ನಂಬಿ ಮತ ಹಾಕಿದರು. ಈಗ ಕಾಂಗ್ರೆಸ್ ಸರ್ಕಾರ ವಿಶ್ವಾಸ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article