ಮಂಡ್ಯ: ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನು (H.D Kumaraswamy) ಸೈಲೆಂಟ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್‍ಡಿಕೆ ಆರೋಪಿಸಿದ್ದಾರೆ.
ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ (Congress) ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಧಿಕಾರ ದುರುಪಯೋಗದ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನನ್ನ ಮೇಲೆ ಯುದ್ಧ ಶುರು ಮಾಡಿದ್ದಾರೆ. ಈ ಸರ್ಕಾರದ ಅಕ್ರಮಗಳ ಬಗ್ಗೆ ಟನ್‍ಗಟ್ಟಲೆ ದಾಖಲೆಗಳಿವೆ. ಆದರೆ ಯಾವ ರೀತಿಯ ದಾಖಲೆಗಳು ಇದ್ದರೂ ಇವತ್ತಿನ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ.
ನಮ್ಮದು ಬಂದೂಕು ಸಂಸ್ಕೃತಿಯಲ್ಲ, ನಮ್ಮದು ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿ. ದಾಖಲೆಗಳ ಮುಂದೆ ಬಂದೂಕು ಕೆಲಸಕ್ಕೆ ಬರಲ್ಲ. ಕರ್ನಾಟಕ ರಾಜ್ಯ ಸಿಡಿ, ಪೆನ್‍ಡ್ರೈವ್ ತಯಾರು ಮಾಡುವ ರಾಜ್ಯವಾಗಿದೆ ಎಂದು ಕಾಂಗ್ರೆಸ್‍ನ ಸಚಿವರೆ ಹೇಳಿದ್ದಾರೆ. ಯಾವ ತನಿಖೆ ಮಾಡಿದ್ದೀರಾ ಪರಮೇಶ್ವರ್ ಅವರೇ? ಸಿದ್ದರಾಮಯ್ಯಗೆ (Siddaramaiah) ಇದರ ಬಗ್ಗೆ ಮಾಹಿತಿ ಇಲ್ವಾ? ಯಾರ ಮನೆ ರೇಡ್ ಮಾಡಿಸಿದ್ದೀರಿ? ಏನೇನು ಸಿಕ್ತು? ಯಾಕೆ ಸುಪಾರಿ ಕೊಟ್ರು? ಸುಮ್ಮನೆ ಕೊಡ್ತಾರಾ? ತನಿಖೆ ನಡೆಸಿ ಸತ್ಯ ಹೊರ ತರುತ್ತೀರಾ ಎಂದು ಸಾಲು ಸಾಲು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ನಾನು ಮಾಜಿ ಪ್ರಧಾನಿ ಮಗ, 2 ಬಾರಿ ಸಿಎಂ ಆಗಿದ್ದೆ. ಈಗ ಕೇಂದ್ರ ಮಂತ್ರಿಯಾಗಿದ್ದೇನೆ ನಾನು ಒತ್ತುವರಿ ಮಾಡಲು ಸಾಧ್ಯನಾ? ರೆವಿನ್ಯೂ ಪ್ರಕರಣಕ್ಕೆ ಡಿವೈಎಸ್‍ಪಿ ತನಿಖಾಧಿಕಾರಿ ಮಾಡಿದ್ದು ಇತಿಹಾಸದಲ್ಲೇ ಮೊದಲು. ನನಗೆ ಈ ಪರಿಸ್ಥಿತಿ ತಂದವರು ಇನ್ನೆಷ್ಟು ಮನೆ ಹಾಳು ಮಾಡಿದ್ದೀರಿ? ಎಂದು ಕಿಡಿಕಾರಿದ್ದಾರೆ.
ಕೆರೆ ನುಂಗಿ ಅಣ್ಣನ ಹೆಸರಿಗೆ ರಿಜಿಸ್ಟರ್ ಮಾಡಿಸಿ, ಗಿಫ್ಟ್ ಪಡೆಯುವವರು ಕುಮಾರಸ್ವಾಮಿ ಬಗ್ಗೆ ಮಾತಾಡ್ತೀರಾ? ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಷ್ಟು ಜನರನ್ನ ಬಲಿ ಪಡೆದಿದೆ? ಈ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನು ಪ್ರಚಾರಕ್ಕೆ ದಾಖಲೆ ಕೊಟ್ಟರೂ ನ್ಯಾಯ ದೊರಕಲ್ಲ. ದಾಖಲೆಗಳನ್ನು ಭದ್ರವಾಗಿಟ್ಟಿದ್ದೇನೆ. ಒಂದು ಬಾರಿ 5 ವರ್ಷ ಸ್ವತಂತ್ರ ಸರ್ಕಾರ ಕೊಡಿ. ಎಲ್ಲರನ್ನೂ ನೋಡಿದ್ದೀರಿ, ನನಗೂ ಒಂದು ಅವಕಾಶ ಕೊಡಿ. ಎಲ್ಲಾ ಅಕ್ರಮಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.