– ಎಚ್‍ಡಿಕೆ ಬೆಂಬಲಿಗರಿಂದ ಕೃತ್ಯ ಎಂದು ಆರೋಪ
– ಕಾರಿನ ಚಕ್ರದ ಗಾಳಿ ತೆಗೆದ ಬೆಂಬಲಿಗರು
ರಾಮನಗರ: ಗೋಮಾಳ ಜಮೀನು ಒತ್ತುವರಿ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಪಡೆಯಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ಅವರ ಬೆಂಬಲಿಗರಿಗೆ ಕೋಳಿ ಮೊಟ್ಟೆಯಿಂದ ಹೊಡೆದು ಹಲ್ಲೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ನಡೆದಿದೆ.
ತಮ್ಮ ಮೇಲೆ ಹಲ್ಲೆಗೆ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲಿಗರೇ ಕಾರಣ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್, ಸ್ವರಾಜ್ ಪಕ್ಷದ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಹಾಗೂ ಅವರ ಬೆಂಬಲಿಗರು ಕೇತಗಾನಹಳ್ಳಿಗೆ ಭೇಟಿ ನೀಡಿದ್ದಾರೆ. ಗ್ರಾಮದ ದಲಿತರೊಬ್ಬರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುವ ವೇಳೆ ಬಂದ ಕೆಲವು ಗ್ರಾಮಸ್ಥರು ಹಾಗೂ ಎಚ್‍ಡಿಕೆ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ದೂರಿದ್ದಾರೆ.
ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಬಿಡದಿ ಸಮೀಪದಲ್ಲಿ ಒಟ್ಟು 196 ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಹೈಕೋರ್ಟ್ ನಲ್ಲೂ ಸಹ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ಜನರ ಬಳಿ ಮಾಹಿತಿ ಪಡೆಯಲು ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಆಗಮಿಸಿದ್ದರು.
ಎಸ್.ಆರ್ ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಬಂದಿರುವ ಮಾಹಿತಿ ಪಡೆದ ಎಚ್‍ಡಿಕೆ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಅಲ್ಲದೆ ಕೆಲವರ ಮೇಲೆ ಹಲ್ಲೆ ನಡೆಸಿ ಮೊಟ್ಟೆಯಿಂದ ಹೊಡೆದಿದ್ದು ಕಾರಿನ ಚಕ್ರಗಳ ಗಾಳಿಯನ್ನು ಸಹ ತೆಗೆದಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ಬೇಕೆಂತಲೇ ಎಚ್‍ಡಿಕೆ ಬೆಂಬಲಿಗರು ಹಾಗೂ ಅವರ ಕಡೆಯವರು ಈ ರೀತಿ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗ್ರಾಮದ ಹನುಮಂತೇಗೌಡ ಹಾಗೂ ಕೆಲವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.