ಯಾದಗಿರಿ: ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ತಾವೊಬ್ಬರೆ ಲಿಂಗಾಯತ ನಾಯಕ ಎಂದುಕೊಂಡಿದ್ದಾರೆ. ಬೇರೆ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಬಿಎಸ್‍ವೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಯಾದಗಿರಿ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶರಣಗೌಡ ಕಂದಕೂರ ಲಿಂಗಾಯತ ನಾಯಕರಾಗಿ ಬೆಳೆಯುತ್ತಿದ್ದಾರೆ. ಅವರನ್ನು ತುಳಿಯಲು ಯಡಿಯೂರಪ್ಪ ಮುಂದಾಗಿದ್ದಾರೆ. ದೇವೇಗೌಡ ಬರೀ ಗಲಾಟೆ ಮಾಡಿಸಿ ರಾಜಕೀಯಕ್ಕೆ ಬಂದಿದ್ದಾನೆ ಅಂದುಕೊಂಡಿದ್ದಾರೆ. ಅದಕ್ಕೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ನನ್ನ 60 ವರ್ಷದ ರಾಜಕೀಯದಲ್ಲಿ ಇಂತಹ ಪರಿಸ್ಥಿತಿ ಎಂದೂ ಕಂಡಿಲ್ಲ. ಇದಕ್ಕಾಗಿ ಪೊಲೀಸರ ಮೇಲೆ ಅಸಮಾಧಾನ ಇದೆ ಎಂದರು.
Advertisement
Advertisement
ಜೆಡಿಎಸ್ ಕಾರ್ಯಕರ್ತರೊಂದಿಗೆ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.
Advertisement
ಯಾದಗಿರಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ ನಾನು ಸಹಿಸಲಾರೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
Advertisement
ರಾಜಕೀಯ ದ್ವೇಷದಿಂದ ಗುರುಮಿಠಕಲ್ ಕ್ಷೇತ್ರದ ಅನುದಾನ ರದ್ದು ಮಾಡಿದ್ದಾರೆ. ಇದಕ್ಕಾಗಿ ಸಿಎಂ ಬಿಎಸ್‍ವೈ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕಾರು ತಡೆದು ಮಾತನಾಡುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಹತ್ತಿರ ಯಾವುದೇ ಮಾರಕಾಸ್ತ್ರ ಇರಲಿಲ್ಲ. ಆದರೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾನು ಕರೆ ಮಾಡಿದಾಗ ಡಿಜಿ ಅವರು ಪಿಎಸ್‍ಐ ಮೇಲೆ ಕ್ರಮಕೈಗೊಳ್ಳುತ್ತೇನೆಂದು ಹೇಳಿದರು. ನಂತರ ಕ್ರಮ ಕೈಗೊಳ್ಳುವುದು ಕಷ್ಟ ಎಂದರು. ಸರ್ಕಾರದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಹ ಸ್ವಾತಂತ್ರ್ಯ ಇಲ್ಲವಾಗಿದೆ ಎಂದು ಹರಿಹಾಯ್ದರು.
ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಆದರೆ ಅದನ್ನೇ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಶಾಸಕರುಗಳ ಕ್ಷೇತ್ರಗಳಿಗೆ ಕುಮಾರಸ್ವಾಮಿ ನೀಡಿದ್ದ ಅನುದಾನದಲ್ಲಿ ಕಡಿತ ಮಾಡಿದ್ದಾರೆ. ಇದನ್ನು ಕೇಳಲು ಹೋದ ಜೆಡಿಎಸ್ ಕಾರ್ಯಕರ್ತರ ಮೇಲೆ ಯಾದಗಿರಿಯಲ್ಲಿ ಲಾಠಿಚಾರ್ಜ್ ಮಾಡಲಾಗಿದೆ ಎಂದು ಆರೋಪಿಸಿದರು.
ಉರಿ ಬಿಸಿಲಿನಲ್ಲೇ ಎಚ್‍ಡಿಡಿ ಧರಣಿ ಕುಳಿತಿದ್ದರು. ಇದೇ ವೇಳೆ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಬಾಪುಗೌಡ ಅವರನ್ನು ಅಮಾನತು ಮಾಡುವಂತೆ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದರು. ಮಾಜಿ ಸಚಿವ ಬಂಡೆಪ್ಪ ಕಾಂಶಪೂರ, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
2 ದಿನದಿಂದ ಕಾರ್ಯಕರ್ತರ ಪ್ರತಿಭಟನೆ
ನಗರ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡುವಂತೆ, ಕಳೆದ ಎರಡು ದಿನಗಳಿಂದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೈ ಜೋಡಿಸಿದ್ದಾರೆ.
ಭದ್ರತಾ ದೃಷ್ಟಿಯಿಂದ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ಜಿಲ್ಲಾಡಳಿತ ಮನವಿಗೆ ಸೊಪ್ಪು ಹಾಕದ ದೇವೇಗೌಡರು ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಎಚ್‍ಡಿಡಿ ಆಗಮಿಸುತ್ತಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಲಾಗಿತ್ತು.