ನಿನ್ನೆಯಷ್ಟೇ ಜಗ್ಗೇಶ್ (Jaggesh) ನಟನೆಯ ‘ರಂಗನಾಯಕ’ (Ranganayaka) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎಂದಿನಂತೆ ಈ ಟ್ರೈಲರ್ ಅನ್ನು ವಿಡಂಬನೆಗೆ ಮೀಸಲಿಟ್ಟಿದ್ದಾರೆ ನಿರ್ದೇಶಕ ಗುರುಪ್ರಸಾದ್. ನಟ ಜಗ್ಗೇಶ್ ಮತ್ತು ಗುರುಪ್ರಸಾದ್ (Guruprasad) ಕಾಂಬಿನೇಷನ್ ನಲ್ಲಿ ಈ ಹಿಂದೆ ಬಂದ ಎರಡೂ ಸಿನಿಮಾಗಳಲ್ಲೂ ವಿಡಂಬನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ರಂಗನಾಯಕದಲ್ಲೂ ಅದು ಮುಂದುವರೆದಿದೆ.
ಇದೇ ಚಿತ್ರದ ಹಾಡೊಂದು ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಹಾಡಿನಲ್ಲಿ ಮೀಟೂ ಶ್ರುತಿ, ಬಿಗ್ ಬಾಸ್ ಶ್ರುತಿ ಎಂದು ಇಬ್ಬರು ನಟಿಯರ ಕಾಲೆಳೆದಿದ್ದರು ಗುರುಪ್ರಸಾದ್. ಈಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ಶಿವಣ್ಣ, ಯಶ್, ಸುದೀಪ್, ದರ್ಶನ್, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಗಿರೀಶ್ ಕಾಸರವಳ್ಳಿ ಹೀಗೆ ಅನೇಕ ಕಲಾವಿದರು ಬಂದು ಹೋಗುತ್ತಾರೆ.
ಕನ್ನಡಕ್ಕೆ ತೊಂದರೆ ಆಗ್ತಿದೆ ಬನ್ನಿರಿ ಎಂದು ಕರೆಯುವ ಡೈಲಾಗ್ ನಲ್ಲಿ ಶಿವಣ್ಣ, ಯಶ್, ಸುದೀಪ್, ದರ್ಶನ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ ಗುರುಪ್ರಸಾದ್. ಐಟಂ ಸಾಂಗ್ ವಿಚಾರವಾಗಿ ಗಿರೀಶ್ ಕಾಸರವಳ್ಳಿ ಅವರ ಹೆಸರನ್ನೂ ನಿರ್ದೇಶಕರು ಬಳಸಿಕೊಂಡಿದ್ದು, ಗಿರೀಶ್ ಕಾಸರವಳ್ಳಿ ಸಿನಿಮಾದಲ್ಲಿ ಐಟಂ ಸಾಂಗ್ ಕೇಳಿದಂಗಾತು ಎಂದು ಡೈಲಾಗ್ ಬಿಡ್ತಾರೆ.
ಇದಷ್ಟೇ ಅಲ್ಲ, ನಟಿ ಸುಮಲತಾ ಅವರ ರಾಜಕೀಯದ ಕುರಿತಾಗಿಯೂ ಡೈಲಾಗ್ ಸುಳಿಯುತ್ತದೆ. ಅಂಬರೀಶ್ ಅವರು ಸುಮಲತಾ ಅವರನ್ನು ಸೆಂಟ್ರಲ್ ಕೂಡಿಸಿಲ್ಲವಾ ಎನ್ನುವ ಮಾತು ಬರುತ್ತದೆ. ಇವೆಲ್ಲ ಮಾತುಗಳು ಯಾಕೆ? ಹೇಗೆ? ಎನ್ನುವುದಕ್ಕಾಗಿ ಟ್ರೈಲರ್ ಒಂದ ಸಲ ನೋಡಿಬಿಡಿ.