ಬಿಗ್ ಬಾಸ್ ಮನೆಗೆ (Bigg Boss Kannada 11) ಎಂಟ್ರಿ ಕೊಟ್ಟ ಉಗ್ರಂ ಮಂಜು ಉಗ್ರವಾಗಿ ಆಡಿ ಗಮನ ಸೆಳೆದಿದ್ದರು. ಸಹಸ್ಪರ್ಧಿಗಳಿಗೆ ಅವರು ಠಕ್ಕರ್ ಕೊಡುತ್ತಿದ್ದಾರೆ. ಇದೀಗ ‘ಮಹರ್ಷಿ ದರ್ಶನ’ ಖ್ಯಾತಿಯ ವಿದ್ಯಾಶಂಕರಾನಂದ ಸರಸ್ವತಿ ಬಿಗ್ ಬಾಸ್‌ಗೆ ಆಗಮಿಸಿದ್ದಾರೆ. ಇನ್ನೂ ಮಂಜುಗೆ ಈಗ 38 ವರ್ಷ ವಯಸ್ಸು. ಮದುವೆ (Wedding) ಯಾವಾಗ ಎನ್ನುವ ಪ್ರಶ್ನೆ ಅವರಲ್ಲಿ ಇದೆ. ಹಾಗಾಗಿ ಮಂಜು (Ugramm Manju) ಮದುವೆ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮನೆಗೆ ಎಂಟ್ರಿ ಕೊಟ್ಟ ಗುರೂಜಿ ಜೊತೆ ವೈಯಕ್ತಿಕ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಂಗಿಯರ ಮದುವೆ ಆದಮೇಲೆ ಆಗೋಣ ಎಂದುಕೊಂಡಿದ್ದೆ. ಈಗ 38 ವರ್ಷ ವಯಸ್ಸು ಎಂದರು ಮಂಜು ಅವರು. ಇದಕ್ಕೆ ಉತ್ತರಿಸಿದ ವಿದ್ಯಾಶಂಕರಾನಂದ ಸರಸ್ವತಿ, ನೀನು ಎಮೋಷನಲ್ ಫೂಲ್. ಹೊರಗಡೆ ನೋಡೋದಕ್ಕೆ ಹಲಸಿನ ಹಣ್ಣಿನ ರೀತಿ ಒರಟು ಆಗಿದ್ದೀಯಾ. ಆದರೆ, ನಿನ್ನ ಮನಸ್ಸು ತೊಳೆಗಳ ರೀತಿ ಮೃದು. ಯಾವಾಗಲೂ ಅಸ್ಥಿರತೆ ಕಾಡುತ್ತಿದೆ. ಮೋಸ ಹೋದರೆ ಅಥವಾ ಬೇರೆಯವರಿಗೆ ಅನ್ಯಾಯ ಆದರೆ ಎನ್ನುವ ಭಾವನೆಯಲ್ಲೇ ಬದುಕುತ್ತೀಯ ಎಂದು ಗುರೂಜಿ ಮಾತನಾಡಿದ್ದಾರೆ.
ಬದುಕು ಯಾವಾಗಲೂ ಅಸ್ಥಿರವೇ, ಅದರಲ್ಲಿ ಸ್ಥಿರತೇ ಕಂಡುಕೊಳ್ಳಬೇಕು. ಮುಂದಿನ ನಾಲ್ಕು ವರ್ಷ ಅಂದರೆ 2029ರವರೆಗೆ ತಿರುಗಿ ನೋಡುವ ಮಾತೇ ಇಲ್ಲ. 2026ರವರೆಗೆ ಕಂಕಣ ಬಲ ಇದೆ. ಹೊರಗೆ ಹೋಗ್ತಾ ಇದ್ದ ಹಾಗೆ ಮದುವೆ ಆಗುತ್ತದೆ. ಒಳ್ಳೆಯ ಸಂಗಾತಿ ಬರುತ್ತಾಳೆ. ಮಂಜು ಎಂದರೆ, ಒಳ್ಳೆಯ ಹೆಸರು ಬರುತ್ತದೆ. ತಲೆಗೆ ಏರಿಸಿಕೊಳ್ಳಬೇಡ ಎಂದು ಕಿವಿ ಮಾತು ಹೇಳಿದರು. ಇದಕ್ಕೆ ಮಂಜು ಖುಷಿಯಿಂದ ತಲೆ ಆಡಿಸಿದರು. ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ. ತಾಯಿಯನ್ನು ಕಳೆದುಕೊಳ್ಳೋಕೆ ಹೋಗಲೇಬಾರದು ಎಂದು ಗುರೂಜಿ ಹೇಳುತ್ತಿದ್ದಂತೆ ನೀವು ಹೇಳಿದ್ದು ಸರಿ ಇದೆ ಎಂದರು ಮಂಜು.
ಇನ್ನೂ ಫಿನಾಲೆ ವಾರದಲ್ಲಿ 6 ಸ್ಪರ್ಧಿಗಳಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ, ಹನುಮಂತ, ರಜತ್ ಈ ಸ್ಪರ್ಧಿಗಳು ಟಾಪ್ 6 ಫೈನಲಿಸ್ಟ್ ಆಗಿದ್ದಾರೆ. ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.