ದಂಪತಿ ಬಳಿ ದರೋಡೆಗೆ ಯತ್ನಿಸಿದವರೇ 100 ರೂ. ವಾಪಸ್ ನೀಡಿ ಜಾಗ ಖಾಲಿ ಮಾಡಿದ್ರು

Public TV
2 Min Read
Delhi robbery

ನವದೆಹಲಿ: ಕುಡಿದ ಮತ್ತಲ್ಲಿ ಗನ್ ತೋರಿಸಿ ದಂಪತಿ ಬಳಿ ಹಣ ಹಾಗೂ ಚಿನ್ನಾಭರಣ ದೋಚಲು (Robbery) ಯತ್ನಿಸಿದ ದರೋಡೆಕೋರರೇ 100 ರೂ. ವಾಪಸ್ ನೀಡಿ ಜಾಗ ಖಾಲಿ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಘಟನೆ ದೆಹಲಿಯ (Delhi) ಶಾಹದಾರದಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ಪಾನಮತ್ತ ದುಷ್ಕರ್ಮಿಗಳು ಮೊದಲಿಗೆ ಗನ್ ತೋರಿಸಿ ದಂಪತಿ ಬಳಿಯಿಂದ ಹಣ ಹಾಗೂ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆದರೆ ದಂಪತಿ ಬಳಿ ಕೇವಲ 20 ರೂ. ಹಾಗೂ ನಕಲಿ ಆಭರಣ ಧರಿಸಿರುವುದನ್ನು ಕಂಡ ಅವರು ಬಡ ಸ್ಥಿತಿ ಬಗ್ಗೆ ಅರಿವಾಗಿ, ದಂಪತಿ ಕೈಗೆ 100 ರೂ. ಯನ್ನು ಇಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಹರಿದಾಡಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ದರೋಡೆ ಮಾಡಲು ಯತ್ನಿಸಿರುವುದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಘಟನೆ ಜೂನ್ 21 ರಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಹಾಡಹಗಲೇ ದರೋಡೆ – ನಡುರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ, ಗನ್ ತೋರ್ಸಿ ಹಣ ದೋಚಿದ ದುಷ್ಕರ್ಮಿಗಳು

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು ತನಿಖೆಯನ್ನು ಆರಂಭಿಸಿ ಇಬ್ಬರೂ ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ದರೋಡೆಕೋರರನ್ನು ದೇವ್ ವರ್ಮಾ ಹಾಗೂ ಹರ್ಷ ರಜಪೂತ್ ಎಂದು ಗುರುತಿಸಲಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದುಷ್ಕರ್ಮಿಗಳಿಂದ ಪಿಸ್ತೂಲ್, ಅಪರಾಧಕ್ಕೆ ಬಳಸಿದ ಸ್ಕೂಟರ್ ಹಾಗೂ 30 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ 4 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಶಹದಾರ ರೋಹಿತ್ ಮೀನಾ ತಿಳಿಸಿದ್ದಾರೆ. ಆರೋಪಿಗಳನ್ನು ಗುರುತಿಸಲು 200ಕ್ಕೂ ಹೆಚ್ಚು ಸಿಸಿಟಿವಿ ಕ್ಲಿಪ್‌ಗಳನ್ನು ಬಳಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

Share This Article