ಒಂದು ಮನೆ ಎಂದ ಮೇಲೆ ಕಿಚನ್ (Kitchen) ಬಹಳ ಮುಖ್ಯ. ಪ್ರತಿಯೊಂದು ಮನೆಯಲ್ಲೂ ಅಡುಗೆಮನೆ ಇದ್ದೇ ಇರುತ್ತದೆ. ಒಂದು ಮನೆಯಲ್ಲಿ ಅಡುಗೆಮನೆ ಇಲ್ಲ ಎಂದರೆ ಮನೆ ಪರಿಪೂರ್ಣ ಎನಿಸುವುದಿಲ್ಲ. ಆದರೆ ಭಾರತದ ಈ ಹಳ್ಳಿಯಲ್ಲಿ ಮಾತ್ರ ಯಾವ ಮನೆಗೆ ಹೋದ್ರು ಅಡುಗೆ ಮನೆ ಕಾಣಲು ಸಿಗಲ್ಲ. ಹಾಗಂತ ಈ ಊರಲ್ಲಿರುವ ಜನರು ಊಟ ಮಾಡದೇ ಉಪವಾಸ ಇರುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡಬಹುದು. ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಮುಂದೆ ಓದಿ.
ಹೌದು, ಈ ಹಳ್ಳಿಯಲ್ಲಿ ಮಹಿಳೆಯರು ಅಥವಾ ಪುರುಷರು ಅಡುಗೆ ಮನೆಯಲ್ಲಿ ಆಹಾರ ತಯಾರಿಸುವುದಿಲ್ಲ. ಆದರೂ ಅವರು ಆರೋಗ್ಯಕರವಾಗಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು? ಎಲ್ಲಿದೆ? ಹಾಗಾದರೆ ಆಹಾರ ಎಲ್ಲಿ ತಯಾರಿಸುತ್ತಾರೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಎಲ್ಲಿದೆ ಹಳ್ಳಿ?
ಗುಜರಾತ್‌ನ (Gujarat) ಆ ವಿಚಿತ್ರ ಹಳ್ಳಿಯ ಹೆಸರು ಚಂದಂಕಿ. ಇಲ್ಲಿನ ಪ್ರತಿ ಮನೆಯಲ್ಲಿ ಒಲೆ ಉರಿಸುವುದಿಲ್ಲ, ಆದರೆ ಇಲ್ಲಿ ಎಲ್ಲಾ ಜನರಿಗೆ ಒಂದೇ ಸ್ಥಳದಲ್ಲಿ ಆಹಾರವನ್ನು ಬೇಯಿಸಲಾಗುತ್ತದೆ. ಗ್ರಾಮದ ಪ್ರತಿಯೊಬ್ಬರು ಒಟ್ಟಿಗೆ ಕುಳಿತು ಆಹಾರ ಸೇವಿಸುತ್ತಾರೆ. ವಿಶೇಷವಾಗಿ ಗ್ರಾಮದಲ್ಲಿ ವಾಸಿಸುವ ವೃದ್ಧರಿಗಾಗಿ ಹೊರಗೆ ವಾಸಿಸುವ ಯುವಕರು ಈ ವ್ಯವಸ್ಥೆಯನ್ನು ಮಾಡಿದ್ದಾರೆ, ಇದರಿಂದಾಗಿ ಪೋಷಕರು ಪ್ರತಿದಿನ ಅಡುಗೆ ಮಾಡುವ ತೊಂದರೆಯನ್ನು ಎದುರಿಸಬೇಕಾಗಿಲ್ಲ
ಭಾರತದಲ್ಲಿರುವ ಈ ಗ್ರಾಮವು ತುಂಬಾನೇ ಅಭಿವೃದ್ಧಿಯಾಗಿದ್ದು, ಇಲ್ಲಿದ್ದ ಯುವಕರೆಲ್ಲರೂ ಒಳ್ಳೆಯ ಶಿಕ್ಷಣ ಪಡೆದು, ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ಪಟ್ಟಣ ಸೇರಿದ್ದಾರೆ. ಹೀಗಾಗಿ ಇಲ್ಲಿ ಕಾಣಸಿಗುವವರು ವೃದ್ಧರು ಮಾತ್ರ. ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದ ಈ ಗ್ರಾಮದಲ್ಲಿ ಈಗ ಇರುವುದು 500 ಜನರು ಮಾತ್ರ. ಈ ವಿಶಿಷ್ಟ ಹಳ್ಳಿಯ ಹೆಸರು ಚಂದಂಕಿ (Chandanki), ಇದು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿದೆ. ಅಭಿವೃದ್ಧಿ ಕಂಡಿರುವ ಈ ಗ್ರಾಮಗಳಲ್ಲಿ ಕಾಂಕ್ರೀಟ್ ಹಾಕಿದ ರಸ್ತೆಗಳು ಹಾಗೂ ದಿನದ 24 ಗಂಟೆಗಳ ಕಾಲ ವಿದ್ಯುತ್ ಇರುತ್ತದೆ. ಆದ್ರೆ, ಈ ಗ್ರಾಮದ ಯಾವುದೇ ಮನೆಯಲ್ಲಿ ಅಡುಗೆ ಮನೆಯಿಲ್ಲ. ಹೀಗಾಗಿ ವಿಶಿಷ್ಟ ವ್ಯವಸ್ಥೆಯನ್ನು ಇಲ್ಲಿನ ಜನರು ಮಾಡಿಕೊಂಡಿದ್ದಾರೆ. ಕಮ್ಯುನಿಟಿ ಕಿಚನ್ ಎನ್ನುವ ವಿಶಿಷ್ಟ ವ್ಯವಸ್ಥೆಯಿದ್ದು, ಗ್ರಾಮಸ್ಥರು ಎಲ್ಲರೂ ಸೇರಿ ಒಂದೆಡೆ ಕುಳಿತು ಊಟ ಮಾಡುತ್ತಾರೆ.
ವದ್ಧರ ಸಂಖ್ಯೆ ಜಾಸ್ತಿ:
ವಾಸ್ತವವಾಗಿ, ಈ ಗ್ರಾಮದಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಈ ಗ್ರಾಮದ ಕೆಲವು ಯುವಕರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕೆಲವರು ಭಾರತದ ನಗರಗಳಲ್ಲಿ ಜೀವನ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಗ್ರಾಮಸ್ಥರು ಒಟ್ಟಿಗೆ ಅಡುಗೆ ಮಾಡುವ ಮತ್ತು ಒಟ್ಟಿಗೆ ಊಟ ಮಾಡುವ ಅಭ್ಯಾಸವನ್ನು ಪ್ರಾರಂಭಿಸಿದರು. ಈ ಪದ್ಧತಿ ಇಂದಿಗೂ ನಡೆಸಿಕೊಂಡು ಹೋಗುತ್ತಿದೆ.
ಈ ಗ್ರಾಮದ ಎಲ್ಲಾ ಜನರು ಒಟ್ಟಿಗೆ ತಿನ್ನುವುದಲ್ಲದೆ, ಅವರ ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಬೆಂಬಲಿಸುತ್ತಾರೆ. ಅವರ ನಡುವೆ ಪರಸ್ಪರ ಸಮನ್ವಯದಿಂದ ದೊಡ್ಡ ಸಮಸ್ಯೆಗಳನ್ನು ಸಹ ಪರಿಹರಿಸಿಕೊಳ್ಳುತ್ತಾರೆ. ಜೊತೆಗೆ ಎಲ್ಲಾ ಹಬ್ಬಗಳನ್ನು ಸಹ ಈ ಗ್ರಾಮದಲ್ಲಿ ಒಟ್ಟಿಗೆ ಆಚರಿಸಲಾಗುತ್ತದೆ.
ಏಕತೆಯ ಪ್ರತೀಕ:
ಇಂದುಈ ಗ್ರಾಮವು ಇಡೀ ದೇಶದಲ್ಲಿ ಏಕತೆಯ ಉದಾಹರಣೆಯನ್ನು ನೀಡುತ್ತಿದೆ. ಈ ಗ್ರಾಮದ ಸಂಸ್ಕೃತಿಯನ್ನು ನೋಡಲು ಜನರು ದೂರದೂರದಿಂದ ಬರುತ್ತಾರೆ.
ಗುಜರಾತ್‌ನ ಈ ಚಂದಂಕಿ ಗ್ರಾಮವು ಭಾರತದ ಸುಂದರ ಗ್ರಾಮ ಎಂದೇ ಕರೆಯಬಹುದು. ಈ ಗ್ರಾಮದಲ್ಲಿ ಒಟ್ಟಿಗೆ ಅಡುಗೆ ಮಾಡುವ ಈ ಪದ್ಧತಿ ಕೇವಲ ತಿನ್ನುವುದು ಮತ್ತು ಕುಡಿಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶೇಷವಾಗಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಕೂಡ ಹೊಂದಿದೆ. ಗ್ರಾಮದ ಮೂಲೆ ಮೂಲೆಗಳಲ್ಲಿ ಹರಡುತ್ತಿರುವ ಒಂಟಿತನದ ವಿರುದ್ಧ ಹೋರಾಡುವುದು ಇದರ ಮತ್ತೊಂದು ಉದ್ದೇಶವಾಗಿದೆ. ಇದರಿಂದ ವೃದ್ಧರಲ್ಲಿ ಸಂತೋಷನ್ನು ನೀವು ನೋಡಬಹುದು.
ಅಡುಗೆ ತಯಾರಿಸುವುದು ಎಲ್ಲಿ?
ಈ ಗ್ರಾಮದಲ್ಲಿ ಸಮುದಾಯ ಅಡುಗೆಮನೆಯನ್ನು ನಿರ್ಮಿಸಲಾಗಿದ್ದು, ಇಡೀ ಗ್ರಾಮಕ್ಕೆ ಪ್ರತಿದಿನ ಆಹಾರವನ್ನು ತಯಾರಿಸಲಾಗುತ್ತದೆ. ಆಹಾರದಲ್ಲಿ ರುಚಿಕರವಾದ ಬೇಳೆ, ತರಕಾರಿಗಳು, ರೊಟ್ಟಿಗಳನ್ನು ಸೇರಿಸಲಾಗಿರುತ್ತದೆ. ಪ್ರತಿದಿನ 60 ರಿಂದ 100 ಜನರು ಈ ಅಡುಗೆಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡುತ್ತಾರೆ ಮತ್ತು ಅದನ್ನು ಎಲ್ಲಾ ಗ್ರಾಮಸ್ಥರಿಗೆ ಒಟ್ಟಿಗೆ ಬಡಿಸಲಾಗುತ್ತದೆ. ವಾಸ್ತವವಾಗಿ, ಈ ಗ್ರಾಮದಲ್ಲಿ ಪಂಚಾಯತ್ ರಾಜ್ ಪ್ರಾರಂಭವಾದಾಗ, ಇಲ್ಲಿ ಯಾವುದೇ ಗ್ರಾಮ ಪಂಚಾಯತ್ ಚುನಾವಣೆಗಳೇ ನಡೆದಿಲ್ಲ.
ಕಮ್ಯುನಿಟಿ ಕಿಚನ್ ಕಾರಣಿಕರ್ತರು ಯಾರು?
ಕಮ್ಯುನಿಟಿ ಕಿಚನ್ ಎನ್ನುವ ವಿಶಿಷ್ಟ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಗ್ರಾಮದ ಸರಪಂಚ್ ಪೂನಂಬಾಯಿ ಪಟೇಲ್ ಎನ್ನುವ ವ್ಯಕ್ತಿ. ಗ್ರಾಮದಲ್ಲಿರುವ ಈ ಹಾಲ್ ನಲ್ಲಿ 35-40 ಜನರು ಒಟ್ಟಿಗೆ ಕುಳಿತು ಊಟ ಮಾಡಬಹುದು. ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆಯೂ ಇದೆ. ಕಮ್ಯುನಿಟಿ ಕಿಚನ್ ನಲ್ಲಿ ಅಡುಗೆ ಮಾಡಲು ಅಡುಗೆ ಭಟ್ಟರನ್ನು ನೇಮಿಸಿಕೊಳ್ಳಲಾಗಿದ್ದು, ಇವರ ತಿಂಗಳ ಸಂಬಳ ಹನ್ನೊಂದು ಸಾವಿರ ರೂಪಾಯಿಯಂತೆ. ಇನ್ನು, ಮೆನುವಿನಲ್ಲಿ ದಾಲ್, ಅನ್ನ, ಚಪಾತಿ, ಖಿಚಡಿ ಭಕ್ರಿ-ರೋಟಿ, ಮೇಥಿ ಗೋಟಾ, ಧೋಕ್ಲಾ, ಇಡ್ಲಿ ಸಾಂಬಾರ್ ಸೇರಿದಂತೆ ವಿವಿಧ ಸಿಹಿತಿಂಡಿಗಳಿವೆ.
ವೃದ್ಧರೆಲ್ಲರೂ ಒಟ್ಟು ಸೇರಿ ತಿಂಡಿ ಊಟ ಸವಿಯುತ್ತಾರೆ. ಇನ್ನೊಂದು ವಿಶೇಷವೆಂದರೆ ಮೊದಲು ಮಹಿಳೆಯರು ಆಹಾರ ಸೇವಿಸಿದ ಬಳಿಕ ಪುರುಷರು ಆಹಾರ ಸೇವಿಸುತ್ತಾರೆರಂತೆ. ಸಹೋದರತ್ವ ಹಾಗೂ ಏಕತೆಗೆ ಉದಾಹರಣೆಯಂತಿರುವ ಈ ವಿಶಿಷ್ಟ ಗ್ರಾಮವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಜನರು ಭೇಟಿ ನೀಡುತ್ತಾರೆ.
ನಮ್ಮಲ್ಲಿ ಯಾವುದೇ ಒಡಕು ಇಲ್ಲ. ಊರಿನ ಎಲ್ಲಾ ಜನರು ಸೇರಿ 500 ಜನರ ದೊಡ್ಡ ಕುಟುಂಬವನ್ನು ರೂಸಿದ್ದೇವೆ. ನಾವು ಪರಸ್ಪರರ ಸಂತೋಷದಲ್ಲಿ ಹಂಚಿಕೊಳ್ಳುತ್ತೇವೆ. ತೊಂದರೆಯ ಸಮಯದಲ್ಲಿ ನಾವು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತೇವೆʼ ಎಂದು ಪೂನಂ ಭಾಯಿ ಪಟೇಲ್ ತಿಳಿಸಿದ್ದಾರೆ. ಊಟಕ್ಕೆ ಗ್ರಾಮಸ್ಥರು ತಲಾ 2000 ರೂ. ಪಾವತಿಸುತ್ತಾರೆ. 500 ಹಿರಿಯ ನಿವಾಸಿಗಳಿಗೆ ಆಹಾರವನ್ನು ತಯಾರಿಸಲು ಇಲ್ಲಿ ನುರಿತ ಅಡುಗೆಗಾರರನ್ನು ಸಹ ನೇಮಿಸಿಕೊಳ್ಳಲಾಗಿದೆ. ಅದೇನೆ ಇರ್ಲಿ ಇವತ್ತಿನ ದಿನಗಳಲ್ಲಿ ದೇಶದಲ್ಲಿ ಈ ರೀತಿಯಾಗಿ ಸೌಹಾರ್ದಯುತವಾಗಿ ಬದುಕುತ್ತಿರುವುದು ನಿಜವಾಗಿಯೂ ಖುಷಿಯ ವಿಚಾರ.