ನವದೆಹಲಿ: ಗುಜರಾತ್ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುತ್ತಿದ್ದ ವ್ಯಾಟ್ ಕಡಿತಗೊಳಿದೆ. ಶೇ.4 ವ್ಯಾಟ್ ಕಡಿತಗೊಳಿಸಿದ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.93 ರೂ., ಡೀಸೆಲ್ 2.72 ರೂ. ಇಳಿಕೆಯಾಗಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ವ್ಯಾಟ್ ಇಳಿಸಿದ ಮೊದಲ ರಾಜ್ಯ ಗುಜರಾತ್ ಆಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.
Advertisement
ವ್ಯಾಟ್ ಕಡಿತದಿಂದ ಗುಜರಾತ್ ರಾಜ್ಯ ಸರ್ಕಾರಕ್ಕೆ ವಾರ್ಷಿಕ 2,316 ಕೋಟಿ ರೂ ಹೊರೆಯಾಗಲಿದೆ. ಆದರೂ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಎಂದು ಸಿಎಂ ವಿಜಯ್ ರುಪಾನಿ ತಿಳಿಸಿದರು.
Advertisement
ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಕೆಲ ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ರಾಜ್ಯ ಸರ್ಕಾರಗಳು ವ್ಯಾಟ್ ಇಳಿಸಬೇಕೆಂದು ಹೇಳಿದ್ದರು.
Advertisement
ತೈಲಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳ ವಿಧಿಸುವ ವ್ಯಾಟ್ ಪ್ರಮಾಣ ಅಧಿಕವಾಗಿದ್ದು, ಕೇಂದ್ರದ ಅಬಕಾರಿ ಸುಂಕದಲ್ಲೂ ಶೇ.42 ರಷ್ಟು ಹಣವನ್ನು ಪಡೆಯುತ್ತಿವೆ. ಇದರಲ್ಲಿ ಸಂಗ್ರಹವಾದ ಹಣವನ್ನು ರಾಜ್ಯಗಳ ಕಲ್ಯಾಣ ಯೋಜನೆಗೆ ಕೇಂದ್ರ ನೀಡುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದರು.
Advertisement
ಪ್ರಧಾನ್ ಅವರ ಮನವಿಗೆ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರಕ್ಕೆ ತೈಲ ಉತ್ಪನ್ನಗಳ ಮೂಲ ಬೆಲೆಯನ್ನು ಕಡಿತಗೊಳಿಸಲು ತಿಳಿಸಿದ್ದರು. ಈ ಕುರಿತ ಉದಾಹರಣೆಯಾಗಿ ನೆರೆಯ ರಾಜ್ಯ ಜಾರ್ಖಂಡ್ ರಾಜ್ಯದಲ್ಲಿ ಬಿಹಾರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ತೈಲ ಉತ್ಪನ್ನಗಳು ದೊರೆಯುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ ಕೇರಳ ಸರ್ಕಾರವು ತೈಲಗಳ ಮೇಲಿನ ವ್ಯಾಟ್ ಕಡಿತಗೊಳಿಸಲು ನಿರಾಕರಿಸಿತ್ತು.
ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಸಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಇದಾದ ಬಳಿಕ ಬಿಜೆಪಿ ಸರ್ಕಾರಗಳು ವ್ಯಾಟ್ ಇಳಿಸಲು ಚಿಂತನೆ ನಡೆಸಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ವ್ಯಾಟ್ ಇಳಿಸಲಾಗುವುದು ಎಂದು ಕಳೆದ ಗುರುವಾರ ಹೇಳಿದ್ದರು.
ಈ ವರ್ಷದ ಅಂತ್ಯದ ವೇಳೆಗೆ ಗುಜರಾತ್ ರಾಜ್ಯದ ವಿಧಾನ ಸಭಾ ಕ್ಷೇತ್ರ ಚುನಾವಣೆಗಳು ನಡೆಯಲಿವೆ ಹೀಗಾಗಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಗುಜರಾತ್ ನಂತರ ಬಿಜೆಪಿ ಆಡಳಿತ ಇರುವ ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಲು ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.
https://publictv.biskuht.com/it-is-central-govts-responsibility-to-reduce-petrol-diesel-rate-cm/