ಗಾಂಧಿನಗರ: ಗುಜರಾತ್ (Gujarat) ಬಿಜೆಪಿಯ (BJP) ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಣಿಕರ ನಾಡಿನಲ್ಲಿ ನಮಗ್ಯಾರು ಸಾಟಿಯೇ ಇಲ್ಲ ಎಂದು ಕೇಸರಿ ಪಕ್ಷ ರುಜುವಾತುಪಡಿಸಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಗುಜರಾತ್ ಚುನಾವಣೆ ಇತಿಹಾಸದ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿ ಸತತ ಏಳನೇ ಬಾರಿ ಏಕಚಕ್ರಾಧಿಪತ್ಯ ಸ್ಥಾಪಿಸಿದೆ.
ಮೇಲ್ನೋಟಕ್ಕೆ ತ್ರಿಕೋನ ಪೈಪೋಟಿಯಂತೆ ಗುಜರಾತ್ ಚುನಾವಣಾ ಕಂಡರೂ, ಸುಂಟರಗಾಳಿ ರೀತಿಯಲ್ಲಿ ವಿಜಯಪತಾಕೆ ಹಾರಿಸಿದ್ದು ಮಾತ್ರ ಬಿಜೆಪಿಯೇ. ಮೋದಿ ಪಡೆಯ ಸುನಾಮಿ ಮಾದರಿ ಹೊಡೆತದ ಧಾಟಿಗೆ ಕಾಂಗ್ರೆಸ್ ಹೆಚ್ಚು ಕಡಿಮೆ ನಾಮಾವಶೇಷವಾಗಿದೆ. ಪ್ರಚಾರ ವೇಳೆ ಹೆಚ್ಚು ಸೌಂಡ್ ಮಾಡಿದ ಎಎಪಿ ಕೂಡ ಸದ್ದಿಲ್ಲದೇ ಮಕಾಡೆ ಮಲಗಿದೆ. ಈ ಮೂಲಕ 27 ವರ್ಷಗಳ ಆಳ್ವಿಕೆ ನಂತರವೂ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
Advertisement
Advertisement
ಅಲ್ಲದೇ, 1885ರಲ್ಲಿ ಮಾಧವ್ ಸಿನ್ಹಾ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ (Congress) ಗಳಿಸಿದ್ದ 149 ಸ್ಥಾನಗಳ ದಾಖಲೆಯನ್ನು ಇದೇ ಮೊದಲ ಬಾರಿಗೆ ಬಿಜೆಪಿ ಅಳಿಸಿ ಹಾಕಿದೆ. ಮತ ಎಣಿಕೆ ಶುರುವಾದ ಕ್ಷಣದಿಂದ ಕೊನೆಯವರೆಗೂ ಬಿಜೆಪಿ (BJP) ಎಲ್ಲಿಯೂ ಮುನ್ನಡೆ ಬಿಟ್ಟುಕೊಡಲಿಲ್ಲ. ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಇದೇ ಮೊದಲ ಬಾರಿಗೆ 150ಕ್ಕೂ ಹೆಚ್ಚು ಸ್ಥಾನ ಗೆದ್ದು ವಿಜಯದುಂದುಭಿ ಮೊಳಗಿಸಿತು. ಇದನ್ನೂ ಓದಿ: ದೇಶದ ಹಿತಕ್ಕಾಗಿ ಇನ್ನಷ್ಟು ಕಠಿಣ ನಿರ್ಣಯ : ಮೋದಿ
Advertisement
ವಿಧಾನಸಭೆ ಚುನಾವಣೆಗಳ ಪೈಕಿ ಒಂದು ಪಕ್ಷ ಈ ಮಟ್ಟದಲ್ಲಿ ಸೀಟು ದಕ್ಕಿಸಿಕೊಂಡಿರೋದು ಇದೇ ಮೊದಲು. ಒಂದು ರಾಜ್ಯ ಸತತ ಏಳನೇ ಬಾರಿ ಒಂದೇ ಪಕ್ಷಕ್ಕೆ ಅಧಿಕಾರ ನೀಡಿರೋದು ದೇಶದಲ್ಲಿ ಇದು ಎರಡನೇ ಬಾರಿ. (ಬಂಗಾಳದಲ್ಲಿ ಸಿಪಿಎಂ 34 ವರ್ಷ ಆಡಳಿತ ನಡೆಸಿದೆ).
Advertisement
ಪ್ರಚಂಡ ಜಯದ ಕಾರಣ ಕೇಸರಿ ಪಡೆಯ ಸಂಭ್ರಮ ಮುಗಿಲುಮುಟ್ಟಿತ್ತು. ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಾರಥ್ಯದಲ್ಲಿಯೇ ಡಿಸೆಂಬರ್ 12ರಂದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಭೂಪೇಂದ್ರ ಪಟೇಲ್ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಅಂದ ಹಾಗೇ, ಶೇಕಡಾ 10ರಷ್ಟು ಸ್ಥಾನಗಳನ್ನು ಗೆಲ್ಲದ ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನವನ್ನು ಕಳೆದುಕೊಂಡಿದೆ. ಇದನ್ನೂ ಓದಿ: ಬಿಜೆಪಿ ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್‍ಗೆ ಗೆಲುವು