ಗಾಂಧಿನಗರ: ಉತ್ತರಾಖಂಡದ ಬೆನ್ನಲ್ಲೇ ದೇಶದಲ್ಲೇ ಎರಡನೇ ರಾಜ್ಯವಾಗಿ ಗುಜರಾತ್(Gujarat) ಏಕರೂಪ ನಾಗರಿಕ ಸಂಹಿತೆ(UCC) ಜಾರಿಗೆ ತರಲು ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಗುಜರಾತ್ ಏಕರೂಪ ನಾಗರಿಕ ಸಂಹಿತೆ ಮಸೂದೆ, 2026ಕ್ಕೆ ತಮ್ಮ ಅಂಕಿತ ಹಾಕಿದ್ದಾರೆ.
ರಾಜ್ಯ ಸರ್ಕಾರವು ನಿಯಮಾವಳಿಗಳ ಅಧಿಸೂಚನೆ (Notification) ಹೊರಡಿಸಿದ ನಂತರ ಈ ನೂತನ ಕಾಯ್ದೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಪರಿಶಿಷ್ಟ ಪಂಗಡಗಳ (ST) ಸಮುದಾಯವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಗುಜರಾತ್ ವಿಧಾನಸಭೆಯಲ್ಲಿ ಸುಮಾರು ಏಳು ಮುಕ್ಕಾಲು ಗಂಟೆಗಳ ಸುದೀರ್ಘ ಚರ್ಚೆಯ ನಂತರ ಧ್ವನಿ ಮತದ ಮೂಲಕ ಮಸೂದೆಗೆ ಅನುಮೋದನೆ ದೊರೆತಿತ್ತು. ಕಾಯ್ದೆ ಮಂಡನೆ ವೇಳೆ ಮಾತನಾಡಿದ್ದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, “ಸಾಮಾಜಿಕ ಸೌಹಾರ್ದತೆ, ರಾಷ್ಟ್ರೀಯ ಏಕತೆ ಹಾಗೂ ಸಮಾನತೆ ಸಾಧಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶ. ಯುಸಿಸಿ ಮಹಿಳೆಯರ ಹಕ್ಕುಗಳನ್ನು ಬಲಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ” ಎಂದು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಸದಸ್ಯರು ಇದನ್ನು ಸದನ ಸಮಿತಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಸಭಾತ್ಯಾಗ ನಡೆಸಿದ್ದರು.
ಧರ್ಮದ ಭೇದವಿಲ್ಲದೆ ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಹಾಗೂ ಲಿವ್-ಇನ್ ಸಂಬಂಧಗಳಿಗೆ ಸಮಾನ ಕಾನೂನು ಚೌಕಟ್ಟನ್ನು ಕಾಯ್ದೆ ರೂಪಿಸಿದೆ.
ಪುರುಷರಿಗೆ ಕನಿಷ್ಠ 21 ವರ್ಷ ಹಾಗೂ ಮಹಿಳೆಯರಿಗೆ 18 ವರ್ಷ ನಿಗದಿಪಡಿಸಲಾಗಿದೆ. ಧಾರ್ಮಿಕ ಪದ್ಧತಿ ಅಥವಾ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಬಹುದಾದರೂ, ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ಜೀವಂತ ಪತ್ನಿ ಅಥವಾ ಪತಿ ಇರುವಾಗ ಎರಡನೇ ಮದುವೆಯಾಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಕ್ತಸಂಬಂಧಗಳ ನಡುವಿನ ವಿವಾಹ ಅಸಿಂಧುವಾಗಲಿದ್ದು, ನಿಕಾಹ್ ಹಲಾಲ್ನಂತಹ ಪದ್ಧತಿಗಳನ್ನು ನಿಷೇಧಿಸಲಾಗಿದೆ. ವಿಚ್ಛೇದಿತ ದಂಪತಿಗಳು ಯಾವುದೇ ಷರತ್ತುಗಳಿಲ್ಲದೆ ಮರುಮದುವೆಯಾಗಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಜಿಯೋ ಫೈನಾನ್ಸ್ನಿಂದ ಜಿಯೋ ಸಿಲ್ವರ್ ಕೊಡುಗೆ – 10 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಿ!
ದೌರ್ಜನ್ಯ, ವ್ಯಭಿಚಾರ, ಎರಡು ವರ್ಷಗಳಿಗಿಂತ ಹೆಚ್ಚು ಕಾಲ ತೊರೆದುಹೋಗುವುದು, ಮತಾಂತರ ಹಾಗೂ ಗುಣಪಡಿಸಲಾಗದ ಮಾನಸಿಕ ಅಸ್ವಸ್ಥತೆಯ ಆಧಾರದ ಮೇಲೆ ವಿಚ್ಛೇದನ ಪಡೆಯಬಹುದು. ಕನಿಷ್ಠ ಒಂದು ವರ್ಷ ಪ್ರತ್ಯೇಕವಾಗಿ ವಾಸವಿದ್ದಲ್ಲಿ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಅವಕಾಶವಿದೆ.
ಉಯಿಲು (Will) ಬರೆಯದೆ ಮೃತಪಟ್ಟ ವ್ಯಕ್ತಿಯ ಆಸ್ತಿಯಲ್ಲಿ ಪತಿ/ಪತ್ನಿ, ಮಕ್ಕಳು ಹಾಗೂ ಪೋಷಕರಿಗೆ ಸಮಾನ ಪಾಲು ದೊರೆಯಲಿದೆ. ಧರ್ಮದ ಭೇದವಿಲ್ಲದೆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನ ಪಿತ್ರಾರ್ಜಿತ ಹಕ್ಕು ಸಿಗಲಿದೆ.
ಲಿವ್-ಇನ್ ಸಂಬಂಧದಲ್ಲಿರುವ ಜೋಡಿಗಳು ನಿಗದಿತ ರಿಜಿಸ್ಟ್ರಾರ್ಗೆ ಮಾಹಿತಿ ನೀಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಸಂಬಂಧ ಅಂತ್ಯಗೊಂಡಾಗಲೂ ಅಧಿಕೃತ ಮಾಹಿತಿ ನೀಡಬೇಕು.
ಲಿವ್-ಇನ್ ಸಂಬಂಧದಲ್ಲಿ ಜನಿಸಿದ ಮಕ್ಕಳಿಗೆ ದಂಪತಿಯ ಕಾನೂನುಬದ್ಧ ಮಕ್ಕಳ ಮಾನ್ಯತೆ ಸಿಗಲಿದೆ. ಸಂಗಾತಿಯಿಂದ ವಂಚನೆಗೊಳಗಾದ ಮಹಿಳೆಯರು ನ್ಯಾಯಾಲಯದ ಮೂಲಕ ಜೀವನಾಂಶ ಪಡೆಯಲು ಅರ್ಹರಾಗಿರುತ್ತಾರೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ಒಟ್ಟಿಗೆ ವಾಸವಿದ್ದು ನೋಂದಣಿ ಮಾಡಿಸದಿದ್ದರೆ 3 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.


