ಏಕ ಭಾರತ್, ಶ್ರೇಷ್ಠ ಭಾರತ್ – ಅಹಮದಾಬಾದ್‌ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಮೋದಿ ಮೆಚ್ಚುಗೆ

Public TV
2 Min Read
gujarat ahmedabad kannada organisation 75 years anniversary program pralhad joshi narendra Modi Tweet 1

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ ಕನ್ನಡ ಸಂಘದ(Ahmedabad Kannada Organisation) 75ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏಕ ಭಾರತ್, ಶ್ರೇಷ್ಠ ಭಾರತ್. ಇಂತಹ ಸಾಂಸ್ಕೃತಿಕ ವಿನಿಮಯಗಳು ಉತ್ತೇಜನಕಾರಿ. ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿದೆ ಎಂದು ಮೋದಿ ಕನ್ನಡದಲ್ಲೇ ಟ್ವೀಟ್‌ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಅಹಮದಾಬಾದ್‌ನಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಗುಜರಾತ್(Gujarat) ಸಿಎಂ ಭೂಪೇಂದ್ರ ಪಟೇಲ್ ಅವರಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ತಮ್ಮ ವೈಯಕ್ತಿಕ ಸಹಕಾರ ನೀಡುವುದಾಗಿ ಅವರು ಹೇಳಿದರು. ವಾರ್ಷಿಕೋತ್ಸವದಲ್ಲಿ ಗುಜರಾತ್‌ ಕನ್ನಡಿಗರೊಂದಿಗೆ ಎರಡು ರಾಜ್ಯಗಳು ಹೊಂದಿರುವ ವಿಶೇಷ ಬಾಂಧವ್ಯದ ಕುರಿತ ಹಲವು ವಿಚಾರಗಳನ್ನು ಹಂಚಿಕೊಂಡರು.

ಒಂದೆಡೆ ದೇಶದ ಆಜಾದಿ ಕಾ ಅಮೃತ ಮಹೋತ್ಸವ ನಡೆಯುತ್ತಿದೆ. ಗುಜರಾತ್ ನಲ್ಲಿ ಕನ್ನಡ ಸಂಘದ 75ನೇ ವರ್ಷದ ಸಂಭ್ರಮ ನಡೆಯುತ್ತಿದೆ. ಅಂದಿನ ದಿನಗಳಲ್ಲಿಯೇ ಕನ್ನಡಿಗರು ಗುಜರಾತ್ ರಾಜ್ಯಕ್ಕೆ ಬಂದು, ಇಲ್ಲಿನ ಜನರೊಂದಿಗೆ ಬೆರೆತು, ವ್ಯಾಪಾರ-ವಹಿವಾಟು ನಡೆಸಿ ಗುಜರಾತನ ಏಳಿಗೆಗೆ ಕೊಡುಗೆಗಳನ್ನು ನೀಡಿದ್ದಾರೆ. ಇದು ಶ್ಲಾಘನೀಯ ಕಾರ್ಯ. ನರ್ಮದಾ ನದಿಯಿಂದ ಕಾವೇರಿವರೆಗೆ ಕನ್ನಡ ಹಾಗೂ ಗುಜರಾತಿ ಮಾತನಾಡುವವರಿದ್ದಾರೆ. ಈ ಬಾಂಧವ್ಯ ನೂರಾರು ವರ್ಷಗಳಿಂದೆ ನಡೆದುಕೊಂಡು ಬಂದಿದೆ ಎಂದು ಜೋಶಿ(Pralhad joshi) ಸಂತಸ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌, ಜನ ಸಂಘ ಹಾಗೂ ಬಿಜೆಪಿಯನ್ನು ಕಟ್ಟುವಾಗ ಆರಂಭಿಕ ದಿನಗಳಲ್ಲಿ ನಮಗೆ ಸಹಕಾರ ನೀಡುತ್ತಿದ್ದವರು ಗುಜರಾತಿಗಳು. ಈ ದೃಷ್ಟಿಯಿಂದ ಈ ಸಮುದಾಯದೊಂದಿಗೆ ನನ್ನ ವಿಶೇಷ ಸಂಬಂಧವಿದೆ ಎಂದು ಜೋಶಿ ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದರು. ಇದನ್ನೂ ಓದಿ: ತಿರುಪತಿಯಲ್ಲಿ ದರ್ಶನಕ್ಕೆ ಕಾಯಬೇಕು 50 ಗಂಟೆ

ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. 200 ವರ್ಷಗಳ ವರೆಗೆ ನಮ್ಮನ್ನು ಆಳಿ, ದೇಶ ಬಿಟ್ಟು ಹೋಗುವಾಗ ಅಪಹಾಸ್ಯ ಮಾಡಿ, ಈ ದೇಶದ ಏಳಿಗೆ ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದ ಬ್ರಿಟಿಷರನ್ನು ಹಿಂದಿಕ್ಕಿ ನಾವು ಇಂದು ಐದನೇ ಅತ್ಯಂತ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಈ ಸಾಧನೆಯಲ್ಲಿ ಕರ್ನಾಟಕ ಹಾಗೂ ಗುಜರಾತ್ ಅತ್ಯಂತ ಮಹತ್ವದ ಕೊಡುಗೆಗಳನ್ನು ನೀಡಿವೆ ಎಂದು ಜೋಶಿ ತಮ್ಮ ಅನಿಸಿಕೆ ಹಂಚಿಕೊಂಡರು.‌

ಈಗ ಸರ್ಕಾರ ಕೈಗೆತ್ತಿಕೊಂಡಿರುವ ಮತ್ತೊಂದು ಮಹತ್ವದ ಕಾರ್ಯ ನೂತನ ಶಿಕ್ಷಣ ನೀತಿ. ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಉತ್ತಮ ನೀತಿಯಾಗಿದೆ. ಆಯಾ ರಾಜ್ಯದಲ್ಲಿ, ಅಲ್ಲಿನ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ. ಇಂಗ್ಲೀಷ್‌ಗಿಂತ ಪುರಾತನ ಇತಿಹಾಸ ಹೊಂದಿರುವ ಭಾಷೆಗಳು ನಮ್ಮ ದೇಶದಲ್ಲಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಈ ನೀತಿ ಜಾರಿಗೊಳಿಸಲಾಗುತ್ತಿದೆ. 19 ಹಾಗೂ 20ನೇ ಶತಮಾನಗಳು ಪಾಶ್ಚಿಮಾತ್ಯರ ಪಾಲಾಗಿದ್ದರೆ, 21ನೇ ಶತಮಾನ ಭಾರತದ್ದಾಗಿ ಮಾಡುವ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದು ಇದೇ ವೇಳೆ ಪ್ರಹ್ಲಾದ್‌ ಜೋಶಿ ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *