ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

Public TV
2 Min Read
HARANI LAKE

– ಮೃತರ ಕುಟುಂಬಸ್ಥರಿಗೆ PMNRFನಿಂದ ತಲಾ 2 ಲಕ್ಷ ಪರಿಹಾರ
– ರಾಜ್ಯ ಸರ್ಕಾರದಿಂದ ಮೃತ ಕುಟುಂಬಗಳಿಗೆ ತಲಾ ರೂ. 4 ಲಕ್ಷ

ಗಾಂಧೀನಗರ: ಗುಜರಾತ್‌ನ ವಡೋದರದ (Gujrat Vadodara) ಹರಾನಿ ಸರೋವರದಲ್ಲಿ (Harani Lake) ದೋಣಿ ಮುಳುಗಿ 9 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.

ಅಧಿಕಾರಿಗಳ ಪ್ರಕಾರ, ವಿಹಾರಕ್ಕೆಂದು ತೆರಳಿದ್ದ ದೋಣಿಯಲ್ಲಿ (Boat) 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿ ಕೆರೆಯಿಂದ ಐವರು ಮಕ್ಕಳನ್ನು ರಕ್ಷಣೆ ಮಾಡಿದೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ವಡೋದರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ಅವರು, ವಿಹಾರಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಹರಾನಿ ಸರೋವರದಲ್ಲಿ ಮಗುಚಿ ಬಿದ್ದಿದೆ. ಅಗ್ನಿಶಾಮಕ ದಳವು ಇದುವರೆಗೆ 7 ವಿದ್ಯಾರ್ಥಿಗಳನ್ನು ರಕ್ಷಿಸಿದೆ, ನಾಪತ್ತೆಯಾದವರಿಗಾಗಿ ಶೋಧ ನಡೆಯುತ್ತಿದೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯರು ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

PMNRFನಿಂದ ಪರಿಹಾರ: ವಡೋದರದ ಹರಾನಿ ಸರೋವರದಲ್ಲಿ ದೋಣಿ ಮುಳುಗಿ ಆಗಿರುವ ಜೀವಹಾನಿಯಿಂದ ನೊಂದಿದ್ದೇನೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸ್ಥಳೀಯಾಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50,000 ನೀಡಲಾಗುವುದು ಎಂದು PMO ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ದುರಂತ ಘಟನೆಯ ನಂತರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಸಂತಾಪ ವ್ಯಕ್ತಪಡಿಸಿದ್ದಾರೆ. ವಡೋದರದ ಹರನಿ ಸರೋವರದಲ್ಲಿ ನಡೆದ ಅವಘಡ ಅತ್ಯಂತ ಹೃದಯ ವಿದ್ರಾವಕವಾಗಿದೆ. ಪ್ರಾಣ ಕಳೆದುಕೊಂಡ ಅಮಾಯಕ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ.  ಅವಘಡದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ರೂ. 4 ಲಕ್ಷ ಹಾಗೂ ಗಾಯಗೊಂಡವರಿಗೆ ರೂ. 50,000 ಪರಿಹಾರ ನೀಡುತ್ತದೆ  ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Share This Article