ಬೆಂಗಳೂರು: ಜೆಡಿಎಸ್‍ನಲ್ಲಿ ಅಸಮಾಧಾನ ಶಮನ ಯತ್ನ ಮುಂದುವರೆದಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ ದೇವೇಗೌಡರನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿದ್ದಾರೆ.
ಜಿಟಿ ದೇವೇಗೌಡ ಅವರು ಸಹಕಾರ ಹಾಗೂ ಅಬಕಾರಿ ಎರಡರಲ್ಲಿ ಒಂದು ಖಾತೆಯನ್ನು ಬಯಸಿದ್ದು, ಈಗಾಗಲೇ ಕುಮಾರಸ್ವಾಮಿ ಜಿ.ಟಿ. ದೇವೇಗೌಡರ ಖಾತೆ ಬದಲಾವಣೆಗೆ ಈಗಾಗಲೇ ಅಸ್ತು ಎಂದಿದ್ದಾರೆ. ಬಂಡೆಪ್ಪ ಕಾಶಂಪುರ್ ಬಳಿ ಇರುವ ಸಹಕಾರ ಖಾತೆ ವಾಪಸ್ ಪಡೆದರೆ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಬಂಡೆಪ್ಪ ಅವರ ಮನವೊಲಿಸಿ ಮುಂದುವರೆಯಲು ಯತ್ನಿಸಿದ್ದಾರೆ.
ಈ ಖಾತೆ ಬದಲಾವಣೆ ಕುರಿತು ತಂದೆಯ ಜೊತೆ ಸಿಎಂ ಚರ್ಚೆ ಮಾಡಿದ್ದು, ಜಿಟಿ ದೇವೇಗೌಡ ಕೂಡ ಮಾಜಿ ಪ್ರಧಾನಿಗಳ ನಿವಾಸದಲ್ಲಿದ್ದಾರೆ. ಬಂಡೆಪ್ಪ ಕಾಶಂಪೂರ್ ಅವರ ಮನವೊಲಿಸುವ ಕಸರತ್ತು ನಡೆಯುತ್ತಿದ್ದು, ಕಾಶಂಪೂರ್ ಬಳಿ ಇರುವ ಸಹಕಾರ ಖಾತೆ ಜಿಟಿಡಿಗೆ ಕೊಡುವ ಸಾಧ್ಯತೆ ಇದೆ.
ಈ ಬಗ್ಗೆ ಬಂಡೆಪ್ಪ ಕಾಶಂಪೂರ್, ಖಾತೆ ಬದಲಾವಣೆ ವಿಚಾರವೇ ತನಗೆ ಗೊತ್ತಿಲ್ಲ. ವರಿಷ್ಠರು ಏನು ತೀರ್ಮಾನ ತಗೋತಾರೆ ಅನ್ನುವುದು ಗೊತ್ತಿಲ್ಲ. ನಾನು ಸಚಿವ ಸ್ಥಾನವನ್ನೇ ಕೇಳಿದವನಲ್ಲ. ಹೀಗಾಗಿ ಖಾತೆ ಯಾವುದಾದರೇನು, ಎಲ್ಲವೂ ವರಿಷ್ಠರಿಗೆ ಬಿಟ್ಟಿದ್ದು. ಆದರೆ ತಕ್ಷಣವೇ ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಸಹಕಾರ ಇಲಾಖೆಯ ಸಭೆ ಕರೆದಿದ್ದೇನೆ. ವರಿಷ್ಟರು ತನ್ನನ್ನು ಕರೆಯಬಹುದು. ಅಲ್ಲಿವರೆಗೆ ಕಾದು ನೋಡೋಣ ಎಂದು ಆಪ್ತರಲ್ಲಿ ಸಚಿವ ಬಂಡೆಪ್ಪ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಜಟಿ ದೇವೇಗೌಡ ಅವರಿಗೆ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಸಿಕ್ಕಿತ್ತು. 8ನೇ ತರಗತಿ ಓದಿರುವ ಜಿಟಿಡಿಗೆ ಈ ಖಾತೆ ಸಿಕ್ಕಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಜಿಟಿಡಿ ಬೆಂಬಲಿಗರು ಸಹ ವಿರೋಧ ವ್ಯಕ್ತಪಡಿಸಿ ಬೇರೆ ಖಾತೆ ನೀಡುವಂತೆ ಆಗ್ರಹಿಸಿದ್ದರು.