ನವದೆಹಲಿ: ಜಿಎಸ್‌ಟಿ (GST 2.0) ನಿಯಮಗಳಲ್ಲಿ ಮಹತ್ವದ ಬದಲಾವಣೆಗೆ ಚಿಂತನೆ ನಡೆದಿದೆ. ಜಿಎಸ್‌ಟಿ ಪ್ರಕರಣಗಳಲ್ಲಿ ಬಂಧನ ಅಧಿಕಾರ ರದ್ದುಪಡಿಸುವ ಪ್ರಸ್ತಾವವೂ ಇದೆ.
ಸರ್ಕಾರದ ‘ಮುಂದಿನ ಪೀಳಿಗೆಯ ಜಿಎಸ್‌ಟಿ’ (Next-Generation GST) ಸುಧಾರಣೆಗಳ ಭಾಗವಾಗಿ, ತೆರಿಗೆ ಪಾವತಿದಾರರನ್ನು ಬಂಧಿಸುವ ಜಿಎಸ್‌ಟಿ ಅಧಿಕಾರಿಗಳ ಅಧಿಕಾರವನ್ನು ರದ್ದುಪಡಿಸುವುದು ಮತ್ತು ಯಾವುದೇ ಬಂಧನಕ್ಕೆ ನ್ಯಾಯಾಲಯದ ಆದೇಶವನ್ನು ಕಡ್ಡಾಯಗೊಳಿಸುವುದು ಸೇರಿದಂತೆ ತೆರಿಗೆ ಜಾರಿ ಪ್ರಕ್ರಿಯೆಯಲ್ಲಿನ ವ್ಯಾಪಕ ಬದಲಾವಣೆಗಳ ಕುರಿತು ಅ.7 ರಂದು ನಡೆಯಲಿರುವ ಸಭೆಯಲ್ಲಿ ಜಿಎಸ್‌ಟಿ ಮಂಡಳಿಯು ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮತದಾನದ ಹಕ್ಕು ಕಸಿಯುವುದು ಸಂವಿಧಾನದ ಆಶಯಕ್ಕೆ ವಿರುದ್ಧ – SIR ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಾಗ್ದಾಳಿ
ಪ್ರಸ್ತಾವಿತ ಸುಧಾರಣೆಯು ಜಿಎಸ್‌ಟಿ (GST) ಅಧಿಕಾರಿಗಳಿಂದ ಈ ಅಧಿಕಾರವನ್ನು ಹಿಂಪಡೆಯುತ್ತದೆ. ಬದಲಾಗಿ, ಯಾವುದೇ ಬಂಧನಕ್ಕೂ ನ್ಯಾಯಾಂಗದ ಅನುಮೋದನೆ ಅಗತ್ಯವಿರುತ್ತದೆ.
ಅಪರಾಧ ಪ್ರಕ್ರಿಯೆಯ ವ್ಯಾಪ್ತಿಯಿಂದ ವರ್ಗೀಕರಣ, ಮೌಲ್ಯಮಾಪನ ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC)ಗೆ ಸಂಬಂಧಿಸಿದ ಸಾಮಾನ್ಯ ವಿವಾದಗಳನ್ನು ಹೊರಗಿಡುವ ನಿಟ್ಟಿನಲ್ಲಿ ಕಾನೂನು ಕ್ರಮದ ನಿಬಂಧನೆಗಳನ್ನು ಸೀಮಿತಗೊಳಿಸುವ ಜೊತೆಗೆ, ಕ್ರಿಮಿನಲ್ ಮೊಕದ್ದಮೆ ಹೂಡಲು ಇರುವ ಆರ್ಥಿಕ ಮಿತಿಯನ್ನು (ಥ್ರೆಶೋಲ್ಡ್) 1 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಏರಿಸುವ ಬಗ್ಗೆಯೂ ಮಂಡಳಿಯು ಪರಿಗಣಿಸುವ ಸಾಧ್ಯತೆಯಿದೆ.
ಸಾಮಾನ್ಯ ತೆರಿಗೆ ವಿವಾದಗಳಿಗೆ ಕ್ರಿಮಿನಲ್ ಕ್ರಮ ಬದಲು ತೆರಿಗೆ, ಬಡ್ಡಿ ಹಾಗೂ ದಂಡ ವಸೂಲಿಗೆ ಒತ್ತು ನೀಡುವುದು. ಸರಕು ವರ್ಗೀಕರಣ, ಮೌಲ್ಯಮಾಪನ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನಂತಹ ವಿವಾದಗಳಿಗೆ ವಿನಾಯಿತಿ ನೀಡುವ ಚಿಂತನೆ ಇದೆ. ಇದನ್ನೂ ಓದಿ: ಇಂಡಿ ಮೈತ್ರಿಕೂಟದೊಂದಿಗೆ ಕೈಜೋಡಿಸಿದ ವಿಜಯ್ – ಅಧಿಕೃತ ನಿರ್ಧಾರ ಪ್ರಕಟಿಸಿದ ಟಿವಿಕೆ
ಜಿಎಸ್‌ಟಿ ಕಾನೂನಿನ 24 ಅಪರಾಧಗಳ ನಿಯಮಗಳನ್ನು ಸಡಿಲಿಸುವ, 9 ಅಪರಾಧಗಳನ್ನು ಕೈಬಿಡುವ ಪ್ರಸ್ತಾವವೂ ಇದೆ. ಕನಿಷ್ಠ ಜೈಲು ಶಿಕ್ಷೆ ಕಡ್ಡಾಯಗೊಳಿಸುವ ನಿಯಮ ತೆಗೆದುಹಾಕುವ ಸಾಧ್ಯತೆಯಿದೆ.

