ಜನರ ಮನೆ ಬಾಗಿಲಿಗೇ ತಲುಪಲಿದೆ ಆರೋಗ್ಯ ಸೇವೆ – ಶೀಘ್ರದಲ್ಲೇ ರಾಜ್ಯಾದ್ಯಂತ ʻಗೃಹ ಆರೋಗ್ಯʼ ಯೋಜನೆ ಜಾರಿ

Public TV
3 Min Read
Gruha Arogya Yojana

ಬದಲಾದ ಜೀವನ ಶೈಲಿ, ಅಧಿಕ ಟೆನ್ಶನ್‌ ಇನ್ನೂ ಹಲವು ಕಾರಣಗಳಿಂದಾಗಿ ಜನ ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಗಳಿಗೆ ಹೆಚ್ಚಾಗಿ ತುತ್ತಾಗಗುತ್ತಿದ್ದಾರೆ. ಆದ್ರೆ ಕಾಯಿಲೆ ತುತ್ತಾಗಿರುವ ಜನ ಪ್ರತಿನಿತ್ಯ ನಿಗದಿತವಾಗಿ ಔಷಧ ಸೇವಿಸದೇ ಸಂಕಷ್ಟಕ್ಕೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಮನಗಂಡು ರಾಜ್ಯ ಸರ್ಕಾರ ಇದೀಗ ರೋಗಿಗಳ ಮನೆ ಬಾಗಿಲಿಗೇ ಔಷಧ ಪೂರೈಕೆ ಮಾಡಲು ನಿರ್ಧರಿಸಿದೆ. ರಕ್ತದೊತ್ತಡ ಹಾಗು ಮಧುಮೇಹ ರೋಗಿಗಳ ಮನೆಗಳಿಗೆ ತೆರಳಿ ಔಷಧ ವಿತರಿಸುವ ʻಗೃಹ ಆರೋಗ್ಯʼ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದು, ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಿದೆ.

Gruha Arogya Yojana 3

ಅದಕ್ಕಾಗಿ ಆಯಾ ಜಿಲ್ಲೆಗಳಲ್ಲಿ ಆರೋಗ್ಯಾಧಿಕಾರಿಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಜಿಲ್ಲೆಯಲ್ಲಿ ಯಾವ ಮನೆಯಲ್ಲಿ ಎಷ್ಟು ಮಂದಿ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ ಎಂಬೆಲ್ಲ ಅಂಕಿ ಅಂಶವನ್ನು ಕಲೆಹಾಕುತ್ತಿದ್ದಾರೆ. ಎಷ್ಟು ಪ್ರಮಾಣದಲ್ಲಿ ಮಾತ್ರೆಗಳನ್ನು ವಿತರಣೆ ಮಾಡಬೇಕು ಎಂಬ ಅಂಕಿ ಅಂಶವನ್ನು ಸಹ ಕುಟುಂಬ ಕಲ್ಯಾಣ ಇಲಾಖೆ ಸಂಗ್ರಹಿಸಿದೆ. ಇದರ ಆಧಾರದ ಮೇಲೆ ಇನ್ಮುಂದೆ ಮನೆ ಬಾಗಿಲಿಗೇ ಔಷಧ ಪೂರೈಕೆ ಆಗಲಿದೆ. ಒಟ್ಟಿನಲ್ಲಿ ರಾಜ್ಯದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ.

ರೋಗಿಗಳ ಮಾಹಿತಿ ಹೇಗಿದೆ?
ಸದ್ಯ ಮೈಸೂರು ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಕಲೆಹಾಕಿರುವ ಪ್ರಕಾರ, ಜಿಲ್ಲೆಯಲ್ಲಿ 1.66 ಲಕ್ಷ ಜನರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೆಯೇ 1.06 ಲಕ್ಷ ಜನರಲ್ಲಿ ಮಧುಮೇಹ ಕಾಯಿಲೆ ಕಾಣಿಸಿಕೊಂಡಿದೆ. ಆಶಾ ಕಾರ್ಯಕರ್ತರು ಮತ್ತು ಅಂಗವಾಡಿ ಕಾರ್ಯಕರ್ತರ ಸಹಾಯದೊಂದಿಗೆ ಆರೋಗ್ಯ ಇಲಾಖೆ ನಡೆಸಿದ ತಪಾಸಣೆ ಸಂದರ್ಭ ರಕ್ತದೊತ್ತಡ ಹಾಗೂ ಮಧುಮೇಹ ಕಾಣಿಸಿಕೊಂಡ ರೋಗಿಗಳಿಗೆ ರೋಗದ ಕುರಿತು ಮಾಹಿತಿ ನೀಡಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ. ಇದರ ಪರಿಣಾಮ ಸಾಕಷ್ಟು ಜನರು ಔಷಧ ಪಡೆದು ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಔಷಧ ಪಡೆಯುತ್ತಿದ್ದು, ಮುಂದಿನ ದಿನ ಗಳಲ್ಲಿ ರೋಗಿಗಳ ಮನೆ ಬಾಗಿಲಿಗೇ ಔಷಧ ಪೂರೈಕೆಯಾಗಲಿದೆ.

Gruha Arogya Yojana 2

ವಾರದಲ್ಲಿ ಯಾವ್ಯಾವ ದಿನ ಔಷಧ ವಿತರಣೆ?
ಸದ್ಯ ರೋಗಿಗಳಿಗೆ ಔಷಧವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ನೀಡಲಾಗುವುದು. 5 ಸಾವಿರ ರೋಗಿಗಳಿಗೆ ಒಬ್ಬರು ಸ್ವಾಫ್ ನರ್ಸ್, 1 ಸಾವಿರ ರೋಗಿಗಳಿಗೆ ಒಬ್ಬರು ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಒಂದು ಬಾರಿ ಒಂದು ಮನೆಗೆ ಭೇಟಿ ನೀಡಿದರೆ ತಿಂಗಳಿಗೆ ಆಗುವಷ್ಟು ಔಷಧ ವಿತರಿಸಲಾಗುವುದು. ಈ ಹಿಂದೆ ಸಾಂಕ್ರಾಮಿಕ ರೋಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜೀವ ಕಳೆದುಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ ಹಾಗೂ ಮಧುಮೇಹವನ್ನು ಸಾಕಷ್ಟು ಜನರು ಉದಾಸೀನವಾಗಿ ಪರಿಗಣಿಸಿ ಔಷಧ ಪಡೆಯಲು ಆಸಕ್ತಿ ತೋರಿಸುವುದಿಲ್ಲ. ಈ ಎರಡೂ ಸಮಸ್ಯೆಗಳು ಮುಂದಿನ ಹಂತದಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗಿ ಜನರು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಮನೆ ಬಾಗಿಲಿಗೇ ಔಷಧ ತಲುಪಿಸುವ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಯೋಜನೆ ಶುರುವಾಗಿದ್ದು ಯಾವಾಗ?
ಗೃಹ ಆರೋಗ್ಯವನ್ನು ಪ್ರಾಯೋಗಿಕವಾಗಿ 2024ರ ಅಕ್ಟೋಬರ್ ತಿಂಗಳಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು. ಅಲ್ಲಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಮುಂದಾಗಿದೆ. 0ಇದಕ್ಕೆ ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಿ, ಸಾಕಷ್ಟು ಪ್ರಮಾಣದಲ್ಲಿ ಔಷಧವನ್ನು ದಾಸ್ತಾನು ಇರಿಸಲಾಗಿದೆ. ಯೋಜನೆಯಡಿ ಪ್ರತಿ ಮನೆಗೂ ತೆರಳಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪಾಸಣೆ ಮಾಡಲಾಗುತ್ತದೆ. ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಮಾತ್ರೆಗಳನ್ನೂ ನೀಡಲಾಗುತ್ತದೆ. ಈ ಔಷಧವನ್ನು ಪ್ರತಿ ತಿಂಗಳು ಪರಿಶೀಲಿಸಿ ಮುಂದುವರಿಕೆಗೆ ಅಗತ್ಯವಿರುವ ಮಾತ್ರೆಗಳನ್ನು ಒದಗಿಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಮೈಸೂರು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಡಿ.ಜಿ ನಾಗರಾಜ್‌.

Gruha Arogya Yojana 4

ಯೋಜನೆಯ ಉದ್ದೇಶಗಳೇನು?
ಕರ್ನಾಟಕದ ಗೃಹ ಆರೋಗ್ಯ ಯೋಜನೆಯ ಮುಖ್ಯ ಉದ್ದೇಶವೆಂದರೆ ರೋಗಗಳನ್ನು ಶೀಘ್ರವಾಗಿ ಪತ್ತೆಹಚ್ಚುವುದು. ಇದು ಅಕಾಲಿಕ ಸಾವು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ತನ, ಗರ್ಭಕಂಠ ಮತ್ತು ಬಾಯಿಯ ಕ್ಯಾನ್ಸರ್ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪರೀಕ್ಷಿಸಲಾಗುತ್ತದೆ. ಈ ಯೋಜನೆಯು ಇತರ ಮಾನಸಿಕ ಆರೋಗ್ಯ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ಸಹ ಪರಿಶೀಲಿಸುತ್ತದೆ. ಅರ್ಹ ಪ್ರಕರಣಗಳಿಗೆ ಉಚಿತ ಔಷಧಿಗಳನ್ನು ಸಹ ಒದಗಿಸಲಾಗುವುದು.

ವರದಿಗಳ ಪ್ರಕಾರ, ಕರ್ನಾಟಕದ ಶೇ. 26.9 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಲ್ಲದೆ, ಜನಸಂಖ್ಯೆಯ ಶೇ. 15.6 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಈ ಸಂಖ್ಯೆಗಳನ್ನು ಕಡಿಮೆ ಮಾಡಲು ಮತ್ತು ಎಲ್ಲರನ್ನೂ ಆರೋಗ್ಯವಾಗಿಡಲು ಯೋಜನೆಯನ್ನು ಜಾರಿಗೊಳಿಸಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.

Share This Article