ಶಿವಮೊಗ್ಗ: 8-10 ಜನರಿದ್ದ ಯುವಕರ ಗುಂಪು ರೌಡಿಶೀಟರ್ ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಹೊರವಲಯದಲ್ಲಿರುವ ಸೂಳೆಬೈಲಿನಲ್ಲಿ ನಡೆದಿದೆ.
ಅಬೀದ್ ಕೊಲೆಯಾದ ರೌಡಿ ಶೀಟರ್. ಇದೇ ಪ್ರದೇಶದ ಅಲಿಂ, ಕಲೀಂ, ಮುನ್ನಾ ಇನ್ನಿತರರು ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹಲವು ಅಪರಾಧಗಳಲ್ಲಿ ಆರೋಪಿಯಾಗಿದ್ದ ಅಬೀದ್ ಇದೇ ಏರಿಯಾದ ಹುಡುಗರ ಜೊತೆಗೂ ವೈರತ್ವ ಕಟ್ಟಿಕೊಂಡಿದ್ದನಂತೆ.
ಇದೇ ಕಾರಣ ಭಾನುವಾರ ಮಧ್ಯಾಹ್ನದಿಂದ ಈತನನ್ನು ನಾಲ್ಕು ಬೈಕಿನಲ್ಲಿ ಫಾಲೋ ಮಾಡಿದ ತಂಡ ಕೊನೆಗೆ ಸೂಳೆಬೈಲಿನ ಆಟದ ಮೈದಾನದ ಬಳಿ ಅಡ್ಡಗಟ್ಟಿ ಕೊಚ್ಚಿ ಹಾಕಿದೆ. ಎದೆ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಬೀದ್ ಮೃತಪಟ್ಟಿದ್ದಾನೆ.
ಸದ್ಯ ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.