ಕೋಲಾರ: ಯುವಕನ ಆರತಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಜಿಲ್ಲೆಯ ಬಂಗಾರಪೇಟೆಯ ಬಾಲಮುರುಗನ್ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ನಡೆಯುತ್ತಿತ್ತು. ಆದ್ರೆ ಕೋಲಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ರಾಜೇಶ್ ಹಾಗೂ ಬಂಗಾರಪೇಟೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರತಕ್ಷತೆ ತಡೆದಿದ್ದಾರೆ.
ಬಂಗಾರಪೇಟೆಯ ವರ ಅಜಯ್ ಕುಮಾರ್ ಮತ್ತು ವಧು ವೇದವತಿಗೆ ಆರತಕ್ಷತೆ ನಿಶ್ಚಯವಾಗಿತ್ತು. ಆದರೆ ವರ ಅಜಯ್ ಕುಮಾರ್ ಗೆ 21 ವರ್ಷ ತುಂಬದ ಹಿನ್ನೆಲೆಯಲ್ಲಿ ಆರತಕ್ಷತೆಯನ್ನು ತಡೆಯಲಾಗಿದೆ. ಆದ್ರೆ ಹಿರಿಯರು ಮದುವೆ ನಿಲ್ಲಿಸಬಾರದು ಎಂದು ಯೋಚಿಸಿದ್ದು, ಒಪ್ಪಂದದ ಮೇರೆಗೆ ಅಲ್ಲಿಯೇ ಇದ್ದಂತಹ ವೇದವತಿ ಅಣ್ಣ ವೇಣು ಹಾಗೂ ವರ ಅಜಯ್ ಕುಮಾರ್ ತಂಗಿ ಅಶ್ವಿನಿಗೆ ಆರತಕ್ಷತೆಯನ್ನು ನಡೆಸಲಾಗಿದೆ. ಇಂದು ಈ ಜೋಡಿಯ ಮದುವೆ ನಡೆದಿದೆ.
ವರ ಅಜಯ್ ಕುಮಾರ್ ಗೆ ಮದುವೆ ವಯಸ್ಸು ತುಂಬುವವರೆಗೆ ಮದುವೆ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಅಧಿಕಾರಿಗಳು ಪ್ರಕರಣವನ್ನು ಸುಖಾಂತ್ಯ ಮಾಡಿದ್ದಾರೆ.