ಲಕ್ನೋ: ಮದುವೆ ಹಿಂದಿನ ದಿನ ಶಾಸ್ತ್ರ ಮಾಡುವ ವೇಳೆ ಆರೋಗ್ಯದಲ್ಲಿ ಏರುಪೇರುಂಟಾಗಿ ಆಸ್ಪತ್ರೆಗೆ ತೆರಳುವ ಸಂದರ್ಭ ಅಪಘಾತದಲ್ಲಿ (Accident) ವರ (Groom) ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.
ಸುಬೋಧ್ ಕುಮಾರ್ (25) ಮೃತ ವ್ಯಕ್ತಿ. ಸುಬೋಧ್ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸರೂರ್ಪುರ್ ಕಲಾನ್ ಗ್ರಾಮದಲ್ಲಿ ಭಾನುವಾರ ರಾತ್ರಿ ಮದುವೆ ಶಾಸ್ತ್ರಗಳಲ್ಲಿ ಭಾಗವಹಿಸಿದ್ದ ವೇಳೆ ಸುಬೋಧ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವಾಗ ರಸ್ತೆಬದಿಯಲ್ಲಿ ಇಳಿದು ಸುಬೋಧ್ ವಾಂತಿ ಮಾಡುತ್ತಿದ್ದರು. ಈ ಸಂದರ್ಭ ದೆಹಲಿ ಕಡೆಯಿಂದ ಬರುತ್ತಿದ್ದ ಟ್ರಕ್‌ವೊಂದು ಸುಬೋಧ್‌ಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಇದನ್ನೂ ಓದಿ: ನಿಂತಿದ್ದ ಎಲೆಕ್ಟ್ರಿಕ್ ಕಾರಿನಲ್ಲಿ ಏಕಾಏಕಿ ಬೆಂಕಿ – ಸುಟ್ಟು ಕರಕಲು
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸುಬೋಧ್‌ನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸಿಎಂ ಹೇಳಿದ್ದೇ ವೇದವಾಕ್ಯ – ಮತ್ತೆ ಗೂಗ್ಲಿ ಎಸೆದ ಡಿಕೆಶಿ
ಬಿನೌಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸದ್ಯ ಘಟನೆ ಸಂಬಂಧ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವ ಪೊಲೀಸರು ಟ್ರಕ್ ಚಾಲಕನ ಪತ್ತೆಗಾಗಿ ಬಲೆಬೀಸಿದ್ದಾರೆ. ಇದನ್ನೂ ಓದಿ: ಭಾರತೀಯ ಚಿತ್ರರಂಗದ ಒಂದು ಯುಗಾಂತ್ಯ – ಧರ್ಮೇಂದ್ರ ನಿಧನಕ್ಕೆ ಮೋದಿ ಸಂತಾಪ
