ಬೆಂಗಳೂರು: ವರ ಹಾಗೂ ವಧು ಮನೆಯವರ ನಡುವೆ ಮಾರಾಮಾರಿ ಆಗಿ ಮಂಟಪದಲ್ಲೇ ಕೈ-ಕೈ ಮಿಲಾಯಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.
ಮದುವೆಯ ಪ್ರಯುಕ್ತ ಸಂಭ್ರದಲ್ಲಿ ಕೂಡಿರಬೇಕಾದ ಮನೆ, ನೋಡ ನೋಡುತ್ತಿದ್ದಂತೆಯೇ ರಣರಂಗವಾಯಿತು. ಹುಡುಗನ ಮದ್ವೆ ವಿಷಯ ತಿಳಿದ ಪೋಷಕರು ಕಳೆದ ರಾತ್ರಿ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ.
ಸಾವಿರ ಸುಳ್ಳು ಹೇಳಿ ಮದ್ವೆ ಮಾಡಿಸು ಅನ್ನೋ ಗಾದೆ ಮಾತಿದೆ. ಆದರೆ ಈ ಮದ್ವೆ ವಿಷಯದಲ್ಲಿ ಹಾಗಾಗಿಲ್ಲ. ಬದಲಾಗಿ ಹುಡುಗನ ಮದ್ವೆ ವಿಷಯ ಸ್ವತಃ ವರನ ತಂದೆ-ತಾಯಿ ಸೇರಿದಂತೆ ಸಂಬಂಧಿಕರಿಗೆಯೇ ತಿಳಿದಿಲ್ಲ. ಹೀಗೆ ವರನ ಕಡೆಯವರಿಗೆ ಗೊತ್ತಿಲ್ಲದೆ ನಡೆಯುತ್ತಿದ್ದ ಮದುವೆ ಮುರಿದು ಬಿದಿದ್ದು, ಬೇಗೂರಿನಲ್ಲಿರುವ ವಿರಾಟ ಭವನ ಚೌಟ್ರಿ ಮಾರಾಮಾರಿಗೆ ವೇದಿಕೆಯಾಗಿತ್ತು.
ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದ ಪರಪ್ಪನ ಅಗ್ರಹಾರದ ನಿವಾಸಿಗಳಾದ ವರ ಕೃಷ್ಣಮೂರ್ತಿ ಹಾಗೂ ವಧು ಸಂಧ್ಯಾ ಕಳೆದ ವಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಶನಿವಾರ ಅಧಿಕೃತವಾಗಿ ಆರಕ್ಷತೆ ಸಮಾರಂಭ ಏರ್ಪಡಿಸಿದ್ದಾರೆ. ಆದರೆ ಈ ವಿಷಯ ಸ್ವತಃ ಹುಡುಗನ ತಂದೆ-ತಾಯಿ ಸೇರಿದಂತೆ ಸಂಬಂಧಿಕರಿಗೆ ತಿಳಿದಿಲ್ಲ. ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಹಾಗೂ ಟಿಸಿಯನ್ನು ನಕಲು ಮಾಡಿ ರಿಜಿಸ್ಟರ್ ಮ್ಯಾರೇಜ್ ಮಾಡಿ ಇದೀಗ ನಮ್ಮ ಹುಡುಗನಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಮಂಟಪದಲ್ಲೇ ಮಾರಾಮಾರಿಗೆ ಇಳಿದಿದ್ದಾರೆ.
ಇನ್ನೂ ಹುಡುಗ ಲಿಂಗಾಯತ ಹುಡುಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆಂಬ ಮಾಹಿತಿ ತಿಳಿದಿದ್ದು, ಇನ್ನೂ ವಧು ಕಡೆಯವರು ಕಾನೂನು ರೀತಿಯಲ್ಲಿ ಆನೇಕಲ್ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾಗಿ ನಂತರ ಸಂಪ್ರದಾಯದಂತೆ ಮದುವೆಯಾಗುತ್ತಿದ್ದರು. ಅಲ್ಲದೆ ವರ ಕೃಷ್ಣಮೂರ್ತಿ ನನ್ನ ಮದುವೆಗೆ ನನ್ನ ಮನೆಯವರು ವಿರೋಧ ವ್ಯಕ್ತಪಡಿಸಿದರು. ಆದರೆ ನಾನು ಎರಡು ವರ್ಷದಿಂದ ಪ್ರೀತಿ ಮಾಡಿದ್ದು, ಯಾವುದೇ ಕಾರಣಕ್ಕೂ ಸಂಧ್ಯಾಳನ್ನ ಬಿಡುವುದಿಲ್ಲ. ತಂದೆ-ತಾಯಿ ಸಂಬಂಧಿಗಳನ್ನು ಬಿಡುತ್ತೇನೆ. ಆದ್ರೆ ಕೈ ಹಿಡಿದ ಪ್ರೀತಿಯ ಪತ್ನಿ ಜೊತೆ ಸಂಸಾರ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನೂ ವಧು ಸಂಬಂಧಿಗಳು ವರನ ಕಡೆಯವರ ವರ್ತನೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಇಷ್ಟೆಲ್ಲಾ ಗಲಾಟೆಯ ನಂತರ ಸಂತೋಷದಿಂದ ವಧು-ವರ ಇಬ್ಬರೂ ಏನೂ ನಡೆದ ಇಲ್ಲ ಎಂದು ಸಂತೋಷದಿಂದ ಮದ್ವೆ ಮನೆಯಲ್ಲಿ ಊಟ ಮಾಡಿದ್ದಾರೆ. ಮಾರಾಮಾರಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಿಗುವಿನ ವಾತಾವರಣವನ್ನು ಶಾಂತಗೊಳಿಸಿದ್ದಾರೆ.