ಹಾಸನ: ವರನ ಕಡೆಯವರು ತಂದ ಸೀರೆಯ ಬಗ್ಗೆ ವಧು ಬೇಸರ ವ್ಯಕ್ತಪಡಿಸಿದ್ದನ್ನೇ ನೆಪ ಮಾಡಿ ಮದುವೆ ದಿನವೇ ವರ ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಒಂದೇ ಗ್ರಾಮದವರಾದ ಯುವಕ ಮತ್ತು ಯುವತಿ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಕುಟುಂಬದವರೂ ಒಪ್ಪಿಗೆ ನೀಡಿದ್ದರು. ಹೀಗಾಗಿ ಬುಧವಾರ ಸ್ವಗ್ರಾಮದಲ್ಲೇ ಮದುವೆ ಮಾಡಲು ಹಿರಿಯರು ನಿರ್ಧರಿಸಿದ್ದರು.
ನಿನ್ನೆ ಮದುವೆಗೆ ತಂದ ಸೀರೆಯ ಬಗ್ಗೆ ಯುವತಿ ಬೇಸರ ವ್ಯಕ್ತಪಡಿಸಿದ್ದಕ್ಕೆ ಯುವಕ ಮದುವೆ ಮನೆಯಿಂದ ನಾಪತ್ತೆ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಈಗ ವಧುವಿನ ಮನೆಯವರು ಹಾಸನ ಮಹಿಳಾ ಠಾಣೆಯಲ್ಲಿ ವರನ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ವರ- ವಧು 4 ವರ್ಷಗಳಿಂದ ಪ್ರೀತಿಸಿಸುತ್ತಿದ್ದು, ತಮ್ಮ ತಂದೆ-ತಾಯಿಗೆ ಒಪ್ಪಿಸಿ ಮದುವೆ ಆಗಲು ನಿರ್ಧರಿಸಿದ್ದರು. ಯುವಕನ ಕುಟುಂಬಸ್ಥರು ಮದುವೆಗೆ ಒಪ್ಪಿಕೊಂಡು ವರದಕ್ಷಿಣೆಯಾಗಿ 35 ಗ್ರಾಂ ಚಿನ್ನಾಭರಣ ಮತ್ತು ಒಂದೂವರೆ ಲಕ್ಷ ರೂ. ಕೇಳಿದ್ದರು. ಅದನ್ನು ಕೊಟ್ಟು ಫೆ. 5ರಂದು ಮದುವೆಯನ್ನು ಫಿಕ್ಸ್ ಮಾಡಲಾಗಿತ್ತು. ಫೆ. 1ರಂದು ಯುವಕ ರಘುಕುಮಾರ್ ಬಂದು ಹೆಚ್ಚಿಗೆ 2 ಲಕ್ಷ ಹಣವನ್ನು ಕೊಟ್ಟರೆ ಮಾತ್ರ ಮದುವೆ ಆಗುತ್ತೇನೆ ಎಂದು ಹೇಳಿ ಹೋಗಿದ್ದನು. ಈ ವಿಚಾರವನ್ನು ಯುವಕನ ತಂದೆ ನಾರಾಯಣ ಮೂರ್ತಿ, ತಾಯಿ ದೇವಿರಮ್ಮ ಹಾಗೂ ಅಣ್ಣ ರವಿಕುಮಾರ್ ಅವರಿಗೆ ಕೇಳಿದಾಗ ಅವರು ಬಾಯಿ ಬಂದಂತೆ ನಿಂದಿಸಿ ವರದಕ್ಷಿಣೆ ಕೊಡದಿದ್ದರೆ, ಮದುವೆ ಮಾಡಿಕೊಳ್ಳುವುದಿಲ್ಲ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಪೊಲೀಸ್‍ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.