ಬೆಂಗಳೂರು: ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಗ್ರೆನೇಡ್ ಕೋಲ್ಕತ್ತಾದಲ್ಲಿ ತಯಾರಾಗಿದ್ದು, ಗ್ರೆನೇಡ್‍ನ ಮೇಲೆ ಯಾವುದೇ ಮಾರ್ಕ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಪಶ್ಚಿಮ ಬಂಗಾಳದ ಸ್ಥಳೀಯ ಫ್ಯಾಕ್ಟರಿಯಲ್ಲಿ ಈ ಗ್ರೆನೇಡ್ ತಯಾರು ಮಾಡಲಾಗಿದೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ದೂರದ ಪಶ್ಚಿಮ ಬಂಗಾಳದಲ್ಲಿ ತಯಾರಾದ ಗ್ರೆನೇಡ್ ಅನ್ನು ಬೆಂಗಳೂರಿಗೆ ತಂದವರು ಯಾರು? ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಇಟ್ಟವರು ಯಾರು? ಎಂಬ ಬಗ್ಗೆ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ!
Advertisement
Advertisement
ಗ್ರೆನೇಡ್ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನುವ ವಿಚಾರ ತಿಳಿದು ಬಂದಿದೆ. ಬೆದರಿಕೆ ಕರೆ ಹಾಗೂ ಗ್ರೆನೇಡ್ ಪತ್ತೆಯಾದ ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ರೈಲ್ವೇ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ. ರೈಲ್ವೇ ಎಸ್‍ಪಿ ಗುಳೇದ್ ನೇತೃತ್ವದಲ್ಲಿ ರೈಲ್ವೇ ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೇ ಮೆಜೆಸ್ಟಿಕ್‍ನಲ್ಲಿರುವ ಹತ್ತು ಪ್ಲಾಟ್ ಫಾರ್ಮ್‍ಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಮೆಜೆಸ್ಟಿಕ್‍ನಿಂದ ಹೊರಡುವ ಎಲ್ಲಾ ರೈಲುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾಗುತ್ತಿದಂತೆ ಸಮೀಪದಲ್ಲಿದ್ದ ಕೆಲವು ಸ್ಟಾಲ್‍ಗಳನ್ನು ಮುಚ್ಚಿಸಿದ್ದಾರೆ.
Advertisement
Advertisement
ಪುಲ್ವಾಮ ದಾಳಿ ನಂತರ ಇಡೀ ರೈಲ್ವೇ ನಿಲ್ದಾಣ ತಪಾಸಣೆ ಮಾಡಲಾಗಿತ್ತು. ಈ ವೇಳೆ ನಿಲ್ದಾಣದ ಸಾಕಷ್ಟು ಕಡೆಗಳಲ್ಲಿ ಸಿಸಿಟಿವಿ ಕೆಲಸ ಮಾಡದಿರುವುದು ಪತ್ತೆಯಾಗಿತ್ತು. ಆಗ ಎಲ್ಲಾ ಕಡೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ರೈಲ್ವೇ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಈಗ ಗ್ರೆನೇಡ್ ಸಿಕ್ಕಿರುವ ಜಾಗಕ್ಕೆ ಐದಾರು ಕಡೆಗಳಿಂದ ಒಳಬರಲು ದಾರಿ ಇದೆ. ಹೀಗಾಗಿಯೂ ಈ ಬಗ್ಗೆ ರೈಲ್ವೇ ಪೋಲೀಸರು ಯಾವುದೇ ಮುಂಜಾಗ್ರತೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.
ಈ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಅದು ಡಮ್ಮಿ ವಸ್ತು. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಾವು ಅಧಿಕಾರಿಗಳಿಂದ ಪಡೆಯುತ್ತೇವೆ. ಅದು ಯಾವ ವಸ್ತು, ಎಲ್ಲಿಂದ ಬಂತು ಅನ್ನೊ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.